ಬೆಂಗಳೂರು : ಮುಂಬರುವ ಶೈಕ್ಷಣಿಕ ವರ್ಷದ ಆರಂಭದ ವೇಳೆಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಲು ಸಿದ್ಧತೆ ನಡೆಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ‘ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯ್ದೆ-2022’ ಕರಡು ನಿಯಮಗಳನ್ನು ಇಂದು ಪ್ರಕಟಿಸಿದೆ.
ಶಿಕ್ಷಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ಸಂಬಂಧ ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಪ್ರಮುಖವಾಗಿ ಪರಸ್ಪರ ವರ್ಗಾವಣೆಗೆ ಈ ವರೆಗೆ ಕೇವಲ ಒಂದು ಬಾರಿ ಮಾತ್ರ ವರ್ಗಾವಣೆ ಬಯಸಲು ಅವಕಾಶವಿತ್ತು. ಆ ನಿಯಮವನ್ನು ಸಡಿಲಗೊಳಿಸಿದೆ. ಸೇವೆಯ ಆರಂಭದ 5 ವರ್ಷಗಳು ಮತ್ತು ಸೇವೆಯ ನಿವೃತ್ತಿಯ ಮುಂಚಿನ 5 ವರ್ಷಗಳನ್ನು ಹೊರತುಪಡಿಸಿ ಪ್ರತಿ 3 ವರ್ಷಗಳಿಗೊಮ್ಮೆ ಎಲ್ಲ ಶಿಕ್ಷಕರೂ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅಲ್ಲದೇ, ಶಿಕ್ಷಕರ ಬಹು ವರ್ಷದ ಬೇಡಿಕೆಯಂತೆ ಶೇ.25 ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇರುವ ಕ್ಷೇತ್ರಗಳಲ್ಲೂ (ತಾಲೂಕು) ಶಿಕ್ಷಕರ ವರ್ಗಾವಣೆಗೆ ಅವಕಾಶ ಕಲ್ಪಿಸಿದೆ. ಪರಸ್ಪರ ವರ್ಗಾವಣೆಗೆ ಒಂದು ಬಾರಿ ಇದ್ದ ಮಿತಿಯನ್ನು ತೆಗೆದು ಹಾಕಲಾಗಿದೆ. ಒಂದೇ ಬ್ಲಾಕ್‌ನಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಮತ್ತು ಎಲ್ಲ ವೃಂದದಲ್ಲಿ 15 ವರ್ಷ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಬ್ಲಾಕ್‌ನಿಂದ ಹೊರಗೆ ವರ್ಗಾವಣೆ ಪಡೆಯಲು ಅವಕಾಶ ಕಲ್ಪಿಸಿದೆ.
ಕಲ್ಯಾಣ ಕರ್ನಾಟಕ, ಮಲೆನಾಡು ಮತ್ತು ಹಿಂದುಳಿದ ಜಿಲ್ಲೆಗಳಿಗೆ ವರ್ಗಾವಣೆ ಬಯಸುವ ಶಿಕ್ಷಕರಿಗೆ ಇದ್ದ ಮಿತಿಯನ್ನು ಸಡಿಲಗೊಳಿಸಿದೆ. ಮರು ಹೊಂದಾಣಿಕೆ ಸಂದರ್ಭದಲ್ಲಿ ಶಿಕ್ಷಕರು ಹಿಂದಿನ ಶಾಲೆಯಲ್ಲಿ ಮಾಡಿದ ಸೇವೆಯನ್ನು ಪರಿಗಣಿಸಲಾಗುತ್ತದೆ. ಪತಿ - ಪತ್ನಿ ಪ್ರಕರಣಗಳಲ್ಲಿ ಶೈಕ್ಷಣಿಕ ತಾಲೂಕಿನಲ್ಲಿ ಹುದ್ದೆಗಳು ಖಾಲಿ ಇಲ್ಲದಿದ್ದರೆ, ಅದೇ ಜಿಲ್ಲೆಯ ಪಕ್ಕದ ತಾಲ್ಲೂಕಿನಲ್ಲಿ ಹುದ್ದೆ ಪಡೆಯಬಹುದಾಗಿದೆ.
ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ: ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ನಿಯಮಗಳು-2022 ಪ್ರಕಟಿಸಿದೆ. ಕರಡಿಗೆ ಸಂಬಂಧಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ. ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಎಂ.ಎಸ್. ಬಿಲ್ಡಿಂಗ್, 6 ನೇ ಮಹಡಿ, ಡಾ. ಅಂಬೇಡ್ಕರ್ ರಸ್ತೆ, ಬೆಂಗಳೂರು- 560001 ಇಲ್ಲಿಗೆ ನ.30 ರೊಳಗೆ ಸಲ್ಲಿಸಬಹುದು ಎಂದು ಇಲಾಖೆ ಅಧೀನ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದಾರೆ.
ಇದನ್ನೂ ಓದಿ : ಶಿಕ್ಷಕರ ವರ್ಗಾವಣೆಗೆ ಕರಡು ನಿಯಮ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಅವಕಾಶ