ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ನೌಕರರ ಕನ್ನಡ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ, ನಗರ ದೇವತೆ ಅಣ್ಣಮ್ಮದೇವಿ ಉತ್ಸವ ಮತ್ತು ಸಾಧಕರಿಗೆ ಡಾ. ಪುನೀತ್ ರಾಜ್‌ಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ಹಿರಿಯ ಹಾಸ್ಯನಟ ದೊಡ್ಡಣ್ಣ, ವಿಶೇಷ ಆಯುಕ್ತ ರಂಗಪ್ಪ, ಪ್ರಧಾನ ಕಾರ್ಯದರ್ಶಿ ಎ.ಅಮೃತ್ ರಾಜ್ ಸೇರಿ ನಗರ ದೇವತೆ ಅಣ್ಣಮ್ಮ ದೇವಿಗೆ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತುಷಾರ್ ಗಿರಿನಾಥ್ ಮಾತನಾಡಿ, ಹೋರಾಟಗಳಿಂದ ಕನ್ನಡ ಭಾಷಾ ಶಿಕ್ಷಣವನ್ನು ಕಡ್ಡಾಯ ಮಾಡುವಂತಾಯಿತು. ನಮ್ಮ ವಿಚಾರವನ್ನು ತಿಳಿಸಲು ಭಾಷೆ ಪ್ರಧಾನವಾಗಿರುತ್ತದೆ. ಬಿ.ಬಿ.ಎಂ.ಪಿ.ಯಲ್ಲಿ ಪೂರ್ತಿ ಕನ್ನಡ ಭಾಷೆಯ ಆಡಳಿತ ನಡೆಸಲಾಗುತ್ತಿದೆ. ಸ್ಥಳೀಯ ಭಾಷೆಯಲ್ಲಿ ಮಾತಾಡಿದಾಗ ಸಂಸ್ಕೃತಿ ಬಗ್ಗೆ ಅರಿವು ಮೂಡುತ್ತದೆ. ಕನ್ನಡ ಭಾಷೆ ಸುಂದರವಾದ ಭಾಷೆಯಾಗಿದೆ ಎಂದು ಬಣ್ಣಿಸಿದರು.
ನಟ ದೊಡ್ಡಣ್ಣ ಮಾತನಾಡಿ, ಮೂರು ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆ ಒಂದು. ಕನ್ನಡ ಕಸ್ತೂರಿಯಂತೆ ಸಂಗೀತಮಯವಾಗಿದೆ. ಕಲಿಯುವುದು ಸುಲಭವಾಗಿದೆ ಎಂದರು. ಈ ಸಂದರ್ಭದಲ್ಲಿ ಪುನೀತ್ ಕನ್ನಡ ಚಲನಚಿತ್ರ ರಂಗದ ರಾಜಕುಮಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾ.ರಾ.ಗೋವಿಂದು ಮಾತನಾಡಿ, ಬ್ರಿಟಿಷರ ಆಳ್ವಿಕೆಯಲ್ಲಿ ಆಡಳಿತ ಭಾಷೆ ಕನ್ನಡವಾಗಿತ್ತು. ಕನ್ನಡ ಭಾಷೆ, ಕನ್ನಡಿಗರಿಗೆ ಅನ್ಯಾಯವಾದರೆ ಸರ್ಕಾರಿ ಮತ್ತು ಬಿ.ಬಿ.ಎಂ.ಪಿ.ನೌಕರರ ಸಂಘ ನಮ್ಮ ಹೋರಾಟಕ್ಕೆ ಕೈ ಜೋಡಿಸುತ್ತಿತ್ತು. ಡಾ. ರಾಜ್ ಕುಮಾರ್ ಕುಟುಂಬ ಮತ್ತು ಬೆಂಗಳೂರು ಮಹಾನಗರ ಪಾಲಿಕೆಯ ನಡುವೆ ಅವಿನಾಭಾವ ಸಂಬಂಧವಿದೆ ಎಂದರು.
ಹಿರಿಯ ಚಿತ್ರನಟಿ ಜಯಲಕ್ಷ್ಮೀ, ಅಶ್ವಿನಿ, ಕೊ.ನಾ.ನಾಗರಾಜ್, ಅರುಣ ಬಾಲರಾಜ್, ಹಿನ್ನೆಲೆ ಗಾಯಕ ಶಶಿಧರ ಕೋಟೆ, ಎಸಿಪಿ ರವಿಕುಮಾರ್, ಪತ್ರಕರ್ತರುಗಳಾದ ಕೆರೆ ಮಂಜುನಾಥ್, ಅವಿನಾಶ್, ಸೋಮಣ್ಣ ಮಾಚಿಮಾಡ, ಅರವಿಂದ್ ಸಾಗರ್, ನಾಗಪ್ಪ, ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದನ್ನೂ ಓದಿ: ಮರಣೋತ್ತರ ಕರ್ನಾಟಕ ರತ್ನ ಪಡೆಯಲಿರುವ ಮೊದಲ ವ್ಯಕ್ತಿ ಪುನೀತ್: ರಾಜ್ಯೋತ್ಸವದಂದು ಪ್ರದಾನ