ಬೆಂಗಳೂರು : ಸೂಕ್ತ ಚಿಕಿತ್ಸೆ ಸಿಗದೆ ಡಾ.ಮಂಜುನಾಥ್ ಮತ್ತು ಚಿಕ್ಕನರಸಿಂಹಯ್ಯ ಎಂಬುವರ ಅಳಿಯ ಸಾವನ್ನಪ್ಪಿದ ಪ್ರಕರಣಗಳನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಂದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.
ನಗರದಲ್ಲಿ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಅನೇಕ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿ ವಕೀಲೆ ಗೀತಾ ಮಿಶ್ರಾ, ಭಾರತ್ ಪುನರುತ್ಥಾನ ಟ್ರಸ್ಟ್ ಸೇರಿ ಸಲ್ಲಿಸಿದ್ದ ಅರ್ಜಿಗಳು ಮತ್ತು ಚಿಕ್ಕನರಸಿಂಹಯ್ಯ ಎಂಬುವರು ಹೈಕೋರ್ಟ್‌ಗೆ ಬರೆದ ಪತ್ರ ಆಧರಿಸಿ ದಾಖಲಿಸಿಕೊಂಡ ಸ್ವಯಂಪ್ರೇರಿತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು ಮೃತ ವೈದ್ಯ ಡಾ.ಮಂಜುನಾಥ್ ಅವರ ಸಾವಿನ ಪ್ರಕರಣ ಕುರಿತು ವೈದ್ಯಾಧಿಕಾರಿಗಳು ಮೂರು ಆಸ್ಪತ್ರೆಗಳಿಗೆ ಭೇಟಿ ನೀಡಿ ನಡೆಸಿದ ವಿಚಾರಣೆಯ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. ವರದಿ ಪರಿಶೀಲಿಸಿದ ಪೀಠ ತೀವ್ರ ಬೇಸರ ವ್ಯಕ್ತಪಡಿಸಿತು. ತನಿಖೆಯನ್ನು ತುಂಬಾ ಔಪಚಾರಿಕವಾಗಿ ನಡೆಸಲಾಗಿದೆ.
ಇದನ್ನು ತನಿಖಾ ವರದಿ ಎಂದು ಕೋರ್ಟ್ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ, ಚಿಕ್ಕ ನರಸಿಂಹಯ್ಯ ಅವರ ಅಳಿಯನ ಸಾವು ಮತ್ತು ವೈದ್ಯ ಡಾ.ಮಂಜುನಾಥ್ ಅವರ ಸಾವಿನ ಪ್ರಕರಣಗಳನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ವಹಿಸಬೇಕು. ಅವರು ಮುಂದಿನ ಮೂರು ವಾರಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ : ಕೊರೊನಾ ಸೋಂಕಿತರಾಗಿದ್ದ ಡಾ.ಮಂಜುನಾಥ್ ಸುಮಾರು 18 ಆಸ್ಪತ್ರೆಗಳಿಗೆ ಅಲೆದಾಡಿದರೂ ಯಾವುದೇ ಆಸ್ಪತ್ರೆಯೂ ಅವರನ್ನು ದಾಖಲಿಸಿಕೊಂಡಿರಲಿಲ್ಲ. ಹೀಗಾಗಿ, ಸೂಕ್ತ ಚಿಕಿತ್ಸೆ ಸಿಗದೆ ಅವರು ಸಾವನ್ನಪ್ಪಿದರು ಎಂಬ ಆರೋಪ ಕೇಳಿ ಬಂದಿತ್ತು. ಹಾಗೆಯೇ ಮತ್ತೊಂದು ಪ್ರಕರಣದಲ್ಲಿ ತಮ್ಮ ಅಳಿಯನಿಗೆ ಕೊರೊನಾ ಹೊರತಾದ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ನಗರದ ಹಲವು ಆಸ್ಪತ್ರೆಗಳಿಗೆ ತೆರಳಿದ್ದೆವು.
ಆದರೆ, 15ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಅಲೆದರೂ ಎಲ್ಲಿಯೂ ಚಿಕಿತ್ಸೆ ಸಿಗಲಿಲ್ಲ. ಹೀಗಾಗಿ ನಮ್ಮ ಅಳಿಯ ಸಾವನ್ನಪ್ಪಿದರು ಎಂದು ಆರೋಪಿಸಿ ಚಿಕ್ಕ ನರಸಿಂಹಯ್ಯ ಎಂಬುವರು ಹೈಕೋರ್ಟ್‌ಗೆ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿದ್ದರು.