ಬೆಂಗಳೂರು: ಹಾವೇರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಗಳು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂಗತಿ ಕನ್ನಡ ಸಾಹಿತ್ಯ ಪರಿಷತ್ತಿನ ಗಮನಕ್ಕೆ ಬಂದಿದೆ. ಪರಿಷತ್ತಿನಿಂದ ಇನ್ನೂ ಅಧಿಕೃತವಾಗಿ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿಲ್ಲ ಎಂದು ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ಸಮ್ಮೇಳನದ ಆಹ್ವಾನ ಪತ್ರಿಕೆಯ ಸಿದ್ಧತೆಯ ಹಂತದಲ್ಲಿ ಚರ್ಚೆಯಾಗಬೇಕಾದಾಗ, ಯಾರದ್ದೋ ಕೈಗೆ ದೊರೆತು, ಗೊಂದಲ ಉಂಟುಮಾಡುವ ದುರುದ್ದೇಶದಿಂದ ಆಹ್ವಾನ ಪತ್ರಿಕೆಯ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆಹ್ವಾನ ಪತ್ರಿಕೆಯನ್ನು ಮುದ್ರಣ ಮಾಡಿಸಿದ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಪರಂಪರೆಯಂತೆ ಮಾಧ್ಯಮಗೋಷ್ಠಿ ಕರೆದು, ಗಣ್ಯರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿ ನಂತರ ಪತ್ರಿಕೆಯಲ್ಲಿ ಇರುವ ಎಲ್ಲಾ ವಿವರಗಳನ್ನು ಮಾಧ್ಯಮಗಳಿಗೆ ನೀಡಿದ ನಂತರವಷ್ಟೇ ಅಧಿಕೃತವಾಗಲಿದೆ ಎಂದಿದ್ದಾರೆ.
ನಿರ್ಲಕ್ಷಿಸಲು ಮಹೇಶ ಜೋಶಿ ವಿನಂತಿ: ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅನಧಿಕೃತ ಆಮಂತ್ರಣ ಪತ್ರಿಕೆಯನ್ನು ಯಾರೂ ನಂಬಬಾರದು. ಈಗಾಗಲೇ ಆಹ್ವಾನ ಪತ್ರಿಕೆಗಳ ಪ್ರತಿಗಳನ್ನು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಲು ಕೆಲ ಕಿಡಿಗೇಡಿಗಳು ಮಾಡಿರುವ ಕುತಂತ್ರ ಎನ್ನುವುದು ಗಮನಕ್ಕೆ ಬಂದಿದೆ. ಅಂಥವರ ವಿರುದ್ಧ ಸೂಕ್ತ ಕ್ರಮಕ್ಕೆ ಪರಿಷತ್ತು ಮುಂದಾಗಲಿದೆ. ಈ ಆಮಂತ್ರಣ ಪತ್ರಿಕೆಗೆ ಯಾರೂ ಯಾವುದೇ ಮಹತ್ವವನ್ನು ನೀಡದೇ, ನಿರ್ಲಕ್ಷಿಸಬೇಕೆಂದು ಎಲ್ಲ ಸಾಹಿತ್ಯಾಭಿಮಾನಿಗಳು, ಕನ್ನಡಾಭಿಮಾನಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಮಹೇಶ ಜೋಶಿ ವಿನಂತಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನ - ಪ್ರಧಾನ ವೇದಿಕೆಯಲ್ಲಿ ಮಾತ್ರ ಕಾರ್ಯಕ್ರಮಗಳ ಆಯೋಜನೆ: ಮಹೇಶ್ ಜೋಶಿ