ಬೆಂಗಳೂರು: ''ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಡಾ.ಹೆಡಗೇವಾರ ಅವರು ಸದಾ ರಾಮ ರಾಜ್ಯ ಮಾಡಬೇಕು ಎಂದು ಶ್ರಮಿಸಿದರು. ಆದರೆ, ಅದೇ ಸಮಯದಲ್ಲಿ ನೆಹರು ಕುಟುಂಬ ಅವರ ವಿರುದ್ಧವಾಗಿ ಕೆಲಸ ಮಾಡಿತು. ನಂತರ ಕಾಂಗ್ರೆಸ್ ಕೂಡ ಬ್ರಿಟಿಷರ ಜೊತೆ ಸೇರಿಕೊಂಡು ದೇಶದ ಸಂಸ್ಕೃತಿ ಮತ್ತು ನಿಜವಾದ ಇತಿಹಾಸ ಜನರ ಮುಂದೆ ತರದೇ ದೇಶ ವಿಭಜನೆ ಮಾಡಿ ಸ್ವಾರ್ಥ ಸಾಧನೆ ಮೆರೆದರು'' ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಣಿ ಸದಸ್ಯ ರಾಮ್ ಮಾಧವ್ ಹೇಳಿದರು.
ಭಾನುವಾರ ಮಂಥನ ಬೆಂಗಳೂರು ವತಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಕಾ. ಶ್ರೀ. ನಾಗರಾಜ ವಿರಚಿತ "ಭಾರತ ಸೀಳು ಹೋಳು" ಮತ್ತು ದೇಶೋನ್ನತಿಯ ಸರ್ವಾಂಗೀಣ ಹರಿಕಾರರು ಎನ್ನುವ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
''ಹಿಂದೂ ಧರ್ಮವನ್ನು ವಿರೋಧಿಸಿ ದೇಶವನ್ನು ಜ್ಯಾತ್ಯತೀತ ಎನ್ನುವ ಸುಳ್ಳು ಭಾವವನ್ನು ಬಿತ್ತಿದರು. ಆದರೆ, ರಾಷ್ಟೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಹೆಡಗೇವಾರ ಸೇರಿದಂತೆ ಹಲವರು ಒಕ್ಕೂರಲಿಂದ ಎಲ್ಲರ ಮನದಲ್ಲಿ ರಾಷ್ಟ್ರೀಯತೆ ತುಂಬಲು ಮುಂದಾದರು. ಇಲ್ಲದಿದ್ದರೆ ಧರ್ಮದ ಆಧಾರದಲ್ಲಿ ಮತ್ತೊಂದು ವಿಭಜನೆ ಇಂದು ನೋಡಬೇಕಾಗುತ್ತಿತ್ತು'' ಎಂದು ಅಭಿಪ್ರಾಯಪಟ್ಟರು.
''ರಾಷ್ಟೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು ಜನರ ಮನೆ ಮನೆಗೆ ತೆರಳಿ ಮನಸ್ಸುಗಳನ್ನು ಮುಟ್ಟಿ ನಮ್ಮ ದೇಶದ ಸಂಸ್ಕೃತಿಯ ರಕ್ಷಣೆಗೆ ಮುಂದಾಗಿದ್ದಾರೆ. ಯಾವುದೇ ಸಮುದಾಯ ಮತ್ತು ಧರ್ಮದ ವಿರೋಧಿಸುವ ಕೆಲಸ ಎಂದೂ ಮಾಡಿಲ್ಲ. ಆದರೆ, ಒಂದು ಧರ್ಮವೇ ದೇಶ ವಿರೋಧಿಯಾದರೆ ಅದನ್ನು ಖಂಡಿಸುವ, ಎಚ್ಚರಿಸುವ ಕೆಲಸ ಮಾಡಿದ್ದಾರೆ. ಸಂಘ ನಿಜವಾದ ಅರ್ಥದಲ್ಲಿ ಯಾವುದೇ ಸಂಸ್ಥೆ ಅಥವಾ ಸಂಘಟನೆಯಲ್ಲ ಒಂದು ವಿಚಾರವಷ್ಟೆ'' ಎಂದು ಸ್ಪಷ್ಪಡಿಸಿದರು.
''ಸಶಕ್ತ, ಸಂಘಟಿತ ರಾಷ್ಟ್ರವನ್ನು ನಿರ್ಮಿಸುವ ಕೆಲಸ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿದೆ. ಆರ್ಎಸ್ಎಸ್ ಸರ್ಕಾರವನ್ನು ನಿಯಂತ್ರಿಸುವ ಕೆಲಸ ಎಂದಿಗೂ ಮಾಡಿಲ್ಲ. ಆದರೆ, ದೇಶದ ವಿಚಾರದಲ್ಲಿ ಒಳ್ಳೆಯ ಕ್ರಮ ಕೈಗೊಂಡಾಗ ಬೆಂಬಲಿಸುವ ಕೆಲಸ ಮಾತ್ರ ಮಾಡುತ್ತಿದೆ'' ಎಂದು ಹೇಳಿದರು.
''ಹಿರಿಯ ಪ್ರಚಾರಕ ನಾಗರಾಜ ಸದಾ ಲವಲಿಕೆಯಿಂದ ಸಂಘದ ಮೂಲಕ ಜನರ ಸೇವೆ ಮಾಡಿದ್ದಾರೆ. ತಮ್ಮ ಲೇಖನ ಬರವಣಿಗೆಗಳ ಮೂಲಕ ದೇಶದ ಪರವಾಗಿ ವಿರೋಧಿ ಶಕ್ತಿಗಳನ್ನು ಖಂಡಿಸುವ ಕೆಲಸವನ್ನು ಈ ಇಳಿ ವಯಸ್ಸಿನಲ್ಲೂ ಮಾಡುತ್ತಿರುವುದು ಶ್ಲಾಘನೀಯ. ಪುಂಗವ ಎನ್ನುವ ಪತ್ರಿಕೆಯನ್ನು ಹಳ್ಳಿ ಹಳ್ಳಿಗೆ ತಲುಪಿಸಿ ಜಾಗೃತಿ ಮೂಡಿಸುವ ಕೆಲಸ ಮೊದಲಿಂದ ಮಾಡಿದ್ದಾರೆ. ದೇಶದ ಸರ್ವಾಂಗೀಣ ಹರಿಕಾರರು ಮತ್ತು ಭಾರತ ಸೀಳು ಹೋಳು ಕೃತಿಗಳ ಮೂಲಕ ಕೂಡ ಅವರ ಅವಿರತ ಪ್ರಯತ್ನ ಮುಂದುವರೆಸಿದ್ದಾರೆ'' ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ವಿಭಾಗದ ಪ್ರಾಂತ ಕಾರ್ಯಕಾರಣಿ ಆಹ್ವಾನಿತ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ''ದೇಶಕ್ಕೊಸ್ಕರ ವಯೋಸಹಜ ಅನಾರೋಗ್ಯದಲ್ಲೂ ಕೂಡ ಎಡಬಿಡದೆ ತಮ್ಮ ಬರವಣಿಗೆಯನ್ನು ಮುಂದುವರೆಸಿ ಜನರಿಗೆ ಜಾಗೃತಿ ಮೂಡಿಸಲು ಹಿರಿಯ ಪ್ರಚಾರಕ ನಾಗರಾಜ ಸದಾ ಸನ್ನದ್ಧರಾಗಿದ್ದಾರೆ. ಅವರ ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಮಾತ್ರ ವಯಸ್ಸಾಗಿಲ್ಲ'' ಎಂದು ತಿಳಿಸಿದರು.
''ದೇಶ ವಿಭಜನೆಯ ವಿಷ ಬೀಜ ಸಾವಿರರೂ ವರ್ಷದ ಹಿಂದೆಯೇ ಬಿತ್ತಲಾಗಿದೆ. ಬ್ರಿಟೀಷರು ಮಾತ್ರ ದೇಶವನ್ನು ಎರಡು ಹೋಳಾಗಿ ಮಾಡಿದರು ಎನ್ನುವುದು ಅರ್ಧ ಸತ್ಯ ಮಾತ್ರ. ದೇಶದ ಪೂರ್ತಿ ಜನರನ್ನು ಕಾಂಗ್ರೆಸ್ ಪಕ್ಷ ಇಷ್ಟೂ ವರ್ಷಗಳ ಕಾಲ ಪಠ್ಯಪುಸ್ತಕಗಳ ಮೂಲಕ, ಪುಸ್ತಕಗಳ ಮತ್ತು ಮಾಧ್ಯಮಗಳ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡಿದೆ'' ಎಂದು ಆರೋಪಿಸಿದರು.
''ಇಸ್ಲಾಂ ಮತ್ತು ಕ್ರೈಸ್ತರು ಪೂರ್ತಿ ತಮ್ಮ ಧರ್ಮವನ್ನು ಹರಡಲು ದೇಶ ವಿಭಜನೆ ಮಾಡುವ ಮೂಲಕ ಒಡೆದು ಆಳುವ ನೀತಿ ಅನುಸರಿಸಿದರು. ಕಾಂಗ್ರೆಸ್ ಕೂಡ ಈ ಹುನ್ನಾರಕ್ಕೆ ಕೈಜೋಡಿಸಿತು. ಈಗಲೂ ಹಿಂದೂಗಳ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆ. ನೆಹರು, ಗಾಂಧೀಜಿ, ರಾಜೇಂದ್ರ ಪ್ರಸಾದ್ ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂದು ಮೋಸ ಮಾಡಿ ಅಧಿಕಾರ ಅನುಭವಿಸಿದರು'' ಎಂದು ಕಿಡಿಕಾರಿದರು.
''ಮುಸ್ಲಿಮರ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮುಂದೆ ಈ ವಿಭಜನೆ ಮತ್ತೆ ನಡೆಯುವ ಸಾಧ್ಯತೆ ಹೆಚ್ಚಿದೆ ಇಂದು ಬಿಡುಗಡೆಯಾಗಿರುವ "ಭಾರತ ಸೀಳು ಹೋಳು" ಕೃತಿ ಎಚ್ಚರಿಕೆ ಕರೆಗಂಟೆಯಾಗಿದೆ ಎಂದು ಹೇಳಿದರು. ಹಿರಿಯ ಪ್ರಚಾರಕರು ಮತ್ತು ಲೇಖಕರಾದ ಕಾ.ಶ್ರೀ. ನಾಗರಾಜ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ: ಇಂದು ಉತ್ತಮ ಆಡಳಿತ ದಿನ... ಏನು ಈ ದಿನದ ಮಹತ್ವ..?