ಬೆಂಗಳೂರು: ಕೊರೊನಾ ಸಂದಿಗ್ಧ ಪರಿಸ್ಥಿತಿ ನಡುವೆಯೂ ಹಣಕ್ಕಾಗಿ ಗಂಡನ ಮನೆಯವರ ಕಿರುಕುಳ ಪ್ರಕರಣಗಳು ಹೆಚ್ಚಾಗಿವೆ. ಕೆಲಸಕ್ಕೆ ಹೋಗಿ ಹಣ ಸಂಪಾದನೆ ಮಾಡಿದರೆ ಮಗನ ಜೊತೆ ಮಲಗಲು ಬಿಡುತ್ತೇನೆ ಎಂದು ಸೊಸೆಗೆ ಅತ್ತೆ ಧಮ್ಕಿ ಹಾಕಿ ಕಿರುಕುಳ ನೀಡಿರುವ ಘಟನೆ ನಗರದಲ್ಲಿ ನಡೆದಿದೆ.
ನಾಗರಭಾವಿಯಲ್ಲಿ ವಾಸವಾಗಿರುವ ಮಂಜುಳಾ (ಹೆಸರು ಬದಲಾಯಿಸಲಾಗಿದೆ) ಶೋಷಣೆಗೆ ಒಳಗಾದವರು. ದೌರ್ಜನ್ಯಕ್ಕೆ ಕಾರಣರಾದ ಗಂಡ ಉಮಾಮಹೇಶ್, ಅತ್ತೆ ಲಲಿತಮ್ಮ, ನಾದಿನಿ ಪುಷ್ಪಾ ಶ್ರೀನಾಥ್ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿರುವ ಹಿನ್ನೆಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಸಾವನದುರ್ಗದ ವೀರಭದ್ರೇಶ್ವರ ದೇವಾಲಯದಲ್ಲಿ ಸಂಪ್ರದಾಯದಂತೆ ಉಮಾಮಹೇಶ್ ನೊಂದಿಗೆ ಮಂಜುಳಾ ಮದುವೆಯಾಗಿ ನಾಗರಬಾವಿಯ ಗಂಡನ ಮನೆಯಲ್ಲಿ ವಾಸವಾಗಿದ್ದರು. ಪ್ರಾರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿಯ ನಡುವೆ ಕಾಲ ಕ್ರಮೇಣ ಜಗಳ ಶುರುವಾಗಿದೆ. ಈಕೆಯ ಅತ್ತೆ ತನ್ನ ಮಗನಿಗೆ ಚಾಡಿ ಹೇಳುತ್ತಿದ್ದಳು ಎನ್ನಲಾಗಿದೆ. ಇದನ್ನ ನಂಬಿಕೊಂಡ ಈಕೆಯ ಗಂಡ ಪ್ರತಿದಿನ ಜಗಳ ಆಡುತ್ತಿದ್ದನಂತೆ. ಅತ್ತೆ ಲಲಿತಮ್ಮ, ನೀನು ಕೆಲಸಕ್ಕೆ ಹೋಗಿ ಹಣ ಸಂಪಾದಿಸಿ ತಂದುಕೊಡು.ಇಲ್ಲದಿದ್ದರೆ ಮಗನ ಜೊತೆ ಮಲಗಲು ಬಿಡುವುದಿಲ್ಲ. ನಿನಗೆ ಮಕ್ಕಳಾದರೆ ಅವರನ್ನು ಸಾಕಬೇಕು ಎಂದು ಹೀಯಾಳಿಸಿ ಮಾತನಾಡಿದ್ದಾರಂತೆ. ಈ ಬಗ್ಗೆ ಮಂಜುಳಾ ದೂರಿನಲ್ಲಿ ದಾಖಲಿಸಿದ್ದಾರೆ.
ಇದರ ನಡುವೆ ಮನೆಯವರ ಶಿಕ್ಷೆ ತಾಳಲಾಗದೆ ಮನೆಯಿಂದ ಹೊರಬಂದ ಮಂಜುಳಾ, ಹೊಯ್ಸಳಕ್ಕೆ ಕರೆ ಮಾಡಿದ್ದಾರೆ. ಪೊಲೀಸರು ರಾಜಿ ಸಂಧಾನ ಮಾಡಿ ತೆರಳಿದ ನಂತರವೂ ಇವರ ವರಸೆ ಮುಂದುವರೆದಿದೆಯಂತೆ. ಪೊಲೀಸರಿಗೆ ಮತ್ತೊಮ್ಮೆ ಹೇಳಿದರೆ ಸುಟ್ಟುಬಿಟ್ಟುವುದಾಗಿ ಧಮ್ಕಿ ಹಾಕಿದ್ದಾರಂತೆ. ಅದೇ ರೀತಿ ಜಮೀನು ವಿಚಾರದಲ್ಲಿ ಖಾಲಿ ಪತ್ರಕ್ಕೆ ಸಹಿ ಹಾಕುವಂತೆ ಒತ್ತಾಯಿಸಿರುವುದಾಗಿ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ಸಂಬಂಧ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅನ್ನಪೂರ್ಣೇಶ್ವರಿ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.