ಬೆಂಗಳೂರು: ಜೆಪಿ ನಗರ ಬಳಿ ಡಬಲ್ ಮರ್ಡರ್ ಪ್ರಕರಣದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ವಿನೋದ ಅಲಿಯಾಸ್ ಕೋತಿ ಪೊಲೀಸರ ಗುಂಡೇಟು ತಿಂದವನು.
ಆರೋಪಿ ಜೆಪಿ ನಗರದಲ್ಲಿ ಆಗಸ್ಟ್ 25ರಂದು ರೌಡಿ ತಮ್ಮ ಮಂಜ ಹಾಗೂ ವರುಣ್ ಕೊಲೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ಬುಧವಾರ ಬೆಂಗಳೂರಿನ ತಲಘಟ್ಟಪುರದ ನಾಗೇಗೌಡನಪಾಳ್ಯ ಬಳಿ ವಿನೋದ ಅಲಿಯಾಸ್ ಕೋತಿ ತಲೆಮರೆಸಿಕೊಂಡಿರುವ ಮಾಹಿತಿ ಮೇರೆಗೆ ತಲಘಟ್ಟಪುರ ಪೊಲೀಸರು ಬಂಧಿಸಲು ಹೋದಾಗ ಪೇದೆ ಪ್ರದೀಪ್ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾನೆ. ಈ ವೇಳೆ ಆತ್ಮ ರಕ್ಷಣೆಗಾಗಿ ಒಂದು ಸುತ್ತು ಗಾಳಿಯಲ್ಲಿ ಎಸ್ಐ ನಾಗೇಶ್ ಗುಂಡು ಹಾರಿಸಿದ್ದಾರೆ. ಪುನಃ ಆರೋಪಿ ಹಲ್ಲೆಗೆ ಮುಂದಾದಾಗ ಈ ವೇಳೆ ಬಲಗಾಲಿಗೆ ತಲಘಟ್ಟಪುರ ಠಾಣೆಯ ಎಸ್ಐ ನಾಗೇಶ್ ಗುಂಡು ಹಾರಿಸಿ ಬಂಧಿಸಿದ್ದಾರೆ.
ಇನ್ನು ಆರೋಪಿ ಮೇಲೆ ಕುಮಾರಸ್ವಾಮಿ, ತಲಘಟ್ಟಪುರ, ದಕ್ಷಿಣಾ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ, ಕೊಲೆ ಯತ್ನ, ರಾಬರಿ ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ಏನಿದು ಪ್ರಕರಣ: ಆಗಸ್ಟ್ 25 ರಂದು ರೌಡಿ ತಮ್ಮ ಮಂಜ ಹಾಗೂ ವರುಣ್ ಹೋಟೆಲ್ನಲ್ಲಿ ಊಟ ಮುಗಿಸಿ ಆ್ಯಕ್ಟಿವಾದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ 2017ರಲ್ಲಿ ಕೊಲೆಯಾದ ಟ್ಯಾಬ್ಲೆಟ್ ರಘು ಸಹಚರರು ತಮ್ಮ ಮಂಜ ಹಾಗೂ ವರುಣ್ನನ್ನ ಕೊಲೆ ಮಾಡಿದ್ರು. ಸದ್ಯ ಕೆಲ ಆರೋಪಿಗಳನ್ನ ದಕ್ಷಿಣಾ ವಿಭಾಗ ಪೊಲೀಸರು ಬಂಧಿಸಿದ್ದು, ಇದೀಗ ಮತ್ತೋರ್ವ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.