ಬೆಂಗಳೂರು: ಆಯುಧ ಪೂಜೆ ವೇಳೆ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡ ಎಂಎಸ್ ಬಹುಮಹಡಿಯಲ್ಲಿ ರಂಗೋಲಿ ಹಾಗೂ ಕುಂಬಳಕಾಯಿಯಲ್ಲಿ ರಾಸಾಯನಿಕ ಮಿಶ್ರಿತ ಬಣ್ಣ, ಕುಂಕುಮ, ಅರಿಶಿನ, ಸುಣ್ಣ ಹಾಗೂ ಇನ್ನಿತರ ಯಾವುದೇ ಬಣ್ಣ ಬಳಸುವಂತಿಲ್ಲ ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಆಯುಧಪೂಜೆ ವೇಳೆ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಕಚೇರಿಗಳ ಒಳಗೆ ಹಾಗೂ ಕಾರಿಡಾರ್‌ಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣ ಬಳಸುವುದರಿಂದ ಹಾನಿಕಾರಕ ಬಣ್ಣ ನೆಲ ಹಾಗೂ ನೆಲಹಾಸಿನ ಮೇಲೆ ಬಿದ್ದು ತಿಂಗಳುಗಳ ಕಾಲ ಹಾಗೆಯೇ ಉಳಿದಿರುತ್ತದೆ. ಇದರಿಂದ ನೆಲಹಾಸುಗಳ ಸೌಂದರ್ಯ ಹಾಳಾಗುತ್ತಿದೆ.
![circulation](https://etvbharatimages.akamaized.net/etvbharat/prod-images/kn-bng-10-government-order-script-7208083_19102020230308_1910f_1603128788_917.jpg)
ಈ ಬಗ್ಗೆ ಕಳೆದ ವರ್ಷ ಹಲವು ಸುತ್ತೋಲೆ ಹೊರಡಿಸಿದರೂ ವಿವಿಧ ಇಲಾಖೆ ಹಾಗೂ ಶಾಖೆಗಳಲ್ಲಿ ಈ ನಿಯಮವನ್ನು ಪಾಲಿಸಿಲ್ಲ. ವಿಧಾನಸೌಧ ಹಾಗೂ ವಿಕಾಸ ಸೌಧ ಪಾರಂಪರಿಕ ಕಟ್ಟಡಗಳಾಗಿರುವುದರಿಂದ ಆಯುಧಪೂಜೆ ನೆರವೇರಿಸುವಾಗ ಕಚೇರಿಯ ಒಳಗೆ ಹಾಗೂ ಕಾರಿಡಾರ್ ಗಳಲ್ಲಿಕುಂಬಳಕಾಯಿ ಮತ್ತು ರಂಗೋಲಿಯಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ಬಣ್ಣ, ಕುಂಕುಮ, ಅರಿಶಿನ, ಸುಣ್ಣ ಹಾಗೂ ಇನ್ನಿತರೆ ಬಣ್ಣಗಳನ್ನು ಬಳಸುವಂತಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸುತ್ತೋಲೆಯಲ್ಲಿ ಆದೇಶಿಸಿದೆ.
![circulation](https://etvbharatimages.akamaized.net/etvbharat/prod-images/kn-bng-10-government-order-script-7208083_19102020230308_1910f_1603128788_860.jpg)
ಪೂಜಾ ದಿನ ಕಚೇರಿಯಿಂದ ಹೊರಡುವ ಮೊದಲು ದೀಪಗಳನ್ನು ಹಾಗೂ ವಿದ್ಯುತ್ ಸ್ವಿಚ್‌ಗಳನ್ನು ಆಫ್ ಮಾಡಬೇಕು. ಈ ನಿಯಮ ಉಲ್ಲಂಘಿಸಿದರೆ ಸಂಬಂಧಪಟ್ಟ ವಿಭಾಗಗಳ ಮುಖ್ಯಸ್ಥರೆ ಹೊಣೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.