ಬೆಂಗಳೂರು : ಕೋಟ್ಯಂತರ ರೂ. ಹಗರಣ ಎಂದೇ ಹೇಳಲಾಗಿರುವ ಬಿಬಿಎಂಪಿಯ ಟಿಡಿಆರ್ ಅವ್ಯಹಾರ ಪ್ರಕರಣದಲ್ಲಿ ಶಾಮೀಲಾಗಿರುವ ಉನ್ನತ ಅಧಿಕಾರಿಗಳ ವಿಚಾರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡದೇ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಾಹಂ ಆರೋಪಿಸಿದ್ದಾರೆ.
ಟಿಡಿಆರ್ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಎಸಿಬಿ ಅವ್ಯವಹಾರದಲ್ಲಿ ಭಾಗಿಯಾದ ಹಲವಾರು ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಕೋರಿ ಸರ್ಕಾರಕ್ಕೆ ಎಸಿಬಿ ಪತ್ರ ಬರೆದಿದೆ. ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಪ್ರಭಾವಿ ಗುತ್ತಿಗೆದಾರರ ಹೆಸರು ಟಿಡಿಆರ್ ಗೋಲ್ ಮಾಲ್ ನಲ್ಲಿ ಕೇಳಿ ಬಂದಿದೆ. ಆರೋಪಿತ ಅಧಿಕಾರಿಗಳ ರಕ್ಷಣೆಗೆ ಸರ್ಕಾರದ ಪ್ರಭಾವಿ ಸಚಿವರು ನಿಂತಿದ್ದಾರೆ ಎಂದು ಈ ಟಿವಿ ಭಾರತ್ಗೆ ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಸಿಬಿ, ಸರ್ಕಾರಕ್ಕೆ ಅಧಿಕಾರಿಗಳ ಪಟ್ಟಿ ಕಳುಹಿಸಿ ತಿಂಗಳುಗಳೇ ಕಳೆದರೂ ಸರ್ಕಾರದಿಂದ ಇನ್ನು ಪ್ರಾಸಿಕ್ಯೂಷನ್ಗೆ ಅನುಮತಿ ಸಿಕ್ಕಿಲ್ಲ. ಇದರಿಂದಾಗಿ ಎಸಿಬಿ ತನಿಖೆಗೆ ತೀವ್ರ ಹಿನ್ನಡೆಯಾಗಿದೆ. ಕೋಟಿ ಗಟ್ಟಲೆ ಅವ್ಯಹಾರದಲ್ಲಿ ಭಾಗಿಯಾದ ಅಧಿಕಾರಿ ವರ್ಗವನ್ನ ಸರ್ಕಾರದ ಪ್ರಭಾವಿಶಾಲಿಗಳು ರಕ್ಷಣೆ ಮಾಡುತ್ತಿದ್ದಾರೆ ಎಂದು ಟಿ ಡಿ ಆರ್ ಪ್ರಕರಣದ ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಅಬ್ರಾಹಂ ಆರೋಪಿಸಿದ್ದು, ಸರ್ಕಾರದ ನಡೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದಾರೆ.
ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ನಡೆಸಲು ಸರ್ಕಾರ ಅನುಮತಿ ನೀಡಬೇಕು, ಇಲ್ಲದಿದ್ದರೆ ತಾವು ಹೈಕೊರ್ಟ್ ನಲ್ಲಿ ಹೋರಾಟ ನಡೆಸುವುದಾಗಿ ಅವರು ಮತ್ತೊಮ್ಮೆ ಎಚ್ಚರಿಕೆ ಕೊಟ್ಟಿದ್ದಾರೆ.