ಬೆಂಗಳೂರು: ನಾಯಿಗಳು ಮರಿ ಹಾಕುವ ಕಾಲವಿದು. ಮರಿ ಹಾಕುವ ಸಮಯ ಬಂದಾಗ ನಾಯಿಗಳು ಹೆಚ್ಚು ಕೋಪದಲ್ಲಿರುತ್ತವೆ. ಈ ವೇಳೆ ಅವುಗಳು ಗುಂಪು ಗುಂಪಾಗಿ ಓಡಾಡುವುದು ಸಾಮಾನ್ಯ. ಮರಿಗಳ ರಕ್ಷಣೆಗೆ ಜನರ ಮೇಲೆ ಎರಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಪಶುಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ ಶ್ರೀಧರ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಸಂಭವಿಸುತ್ತಿರುವ ಸಾಲು ಸಾಲು ಬೀದಿ ನಾಯಿ ಹಾವಳಿ ಬಗ್ಗೆ ಮಾತನಾಡಿದ ಅವರು, ನಾಯಿಗಳಿಗೂ ಭಯ ಇರುತ್ತದೆ. ಹಾಗಾಗಿ ಅವುಗಳು ದುರ್ಬಲರಾದ ಮಕ್ಕಳು, ಮಹಿಳೆಯರ ಮೇಲೆಯೇ ದಾಳಿ ಮಾಡುವುದು ಹೆಚ್ಚು.
ಹೀಗಾಗಿ ನಾಯಿಗಳನ್ನು ದಿಟ್ಟಿಸಿ ನೋಡುವುದಾಗಲಿ, ಹೆಚ್ಚು ನಾಯಿಗಳ ಗುಂಪಿನ ಮಧ್ಯೆ ಕೀಟಲೆ ಮಾಡುವುದಾಗಲಿ ಮಾಡಬಾರದು. ನಾಯಿಗಳನ್ನು ಬೇರೆ ಕಡೆ ಬಿಡುವುದಾಗಲಿ ಅಥವಾ ಕೊಲ್ಲುವುದಾಗಲಿ ಇದಕ್ಕೆ ಪರಿಹಾರವಲ್ಲ. ಇದರಿಂದ ಉಳಿದ ನಾಯಿಗಳು ಹೆಚ್ಚು ಕೋಪಗೊಳ್ಳುತ್ತವೆ ಎಂದಿದ್ದಾರೆ.
ಬೀದಿ ನಾಯಿಗಳ ಹಾವಳಿ ತಡೆಗೆ ಪಾಲಿಕೆ ಕೈಗೊಂಡ ಕ್ರಮ:
ಇದೇ ಹೆಸರಿನಲ್ಲಿ ಬಿಬಿಎಂಪಿ ವರ್ಷ ವರ್ಷ ಲಕ್ಷಾಂತರ ರೂ. ವೆಚ್ಚ ಮಾಡುತ್ತಿದೆ. ಆದರೂ ಸಮರ್ಪಕವಾಗಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಮಾಡುವಲ್ಲಿ ಇಲ್ಲಿನ ಅಧಿಕಾರಿ ವರ್ಗ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಒಂದು ವರ್ಷದಲ್ಲಿ ಒಂದು ನಾಯಿಗೆ 900 ರೂ. ವೆಚ್ಚದಂತೆ ಬರೋಬ್ಬರಿ 47,000 ನಾಯಿಗಳಿಗೆ ಎಬಿಸಿ ಚಿಕಿತ್ಸೆ ನೀಡಲಾಗಿದೆ ಎಂದು ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
ಇದು ನಕಲಿ ಬಿಲ್ ಎನ್ನಲಾಗುತ್ತಿದ್ದು, ಕಳೆದ ಹಲವು ವರ್ಷಗಳಿಂದ ಇದೇ ರೀತಿ ಬೋಗಸ್ ಲೆಕ್ಕಗಳನ್ನು ನೀಡುತ್ತಾ ಜನರ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಈ ಮೂಲಕ ಬಿಬಿಎಂಪಿಯ ಅಧಿಕಾರಿಗಳು ಜನರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪ ಇದೆ.
ಈ ಬಗ್ಗೆ ಮೇಯರ್ ಅವರನ್ನು ಪ್ರಶ್ನಿಸಿದ್ರೆ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಈ ರೀತಿ ಆಗುತ್ತಿದೆ ಎಂದು ಅಧಿಕಾರಿಗಳನ್ನು ದೂರಿದ್ದಾರೆ. ಇತ್ತ ಹೊಸ ಟೆಂಡರ್ ಪ್ರಕ್ರಿಯೆ ಕೂಡಾ ಅರ್ಧಕ್ಕೆ ಸ್ಥಗಿತವಾಗಿದ್ದು, ಒಂದು ವಾರದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.
ಎಬಿಸಿ ಚಿಕಿತ್ಸೆ ನೀಡಲು ಸೆಂಟರ್ಗಳ ಸಮಸ್ಯೆಯಾಗಿವೆ. ದೂರು ಬಂದ ಕಡೆಯಲ್ಲಿ ಮಾತ್ರ ನಾಯಿಗಳನ್ನು ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ನಾಯಿಗಳ ಎಬಿಸಿ ಚಿಕಿತ್ಸೆಯ ಟೆಂಡರ್ ಅನುಮೋದನೆ ಹಂತದಲ್ಲೇ ಇದೆ ಎಂದಿದ್ದಾರೆ.