ಮಹದೇವಪುರ(ಬೆಂಗಳೂರು): ದೊಡ್ಡಬನಹಳ್ಳಿ ಶಾಲೆಯ ಶಿಕ್ಷಕ ನಾಗರಾಜ್ ಅವರು ಈ ಬಾರಿಯ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿವರ್ಷ ಸೆ. 5 ರಂದು (ಶಿಕ್ಷಕರ ದಿನ) ಭಾರತದ ರಾಷ್ಟ್ರಪತಿಗಳಿಂದ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುತ್ತದೆ. ಈ ಪುರಸ್ಕಾರಕ್ಕೆ ಬೆಂಗಳೂರಿನ ಮಹದೇವಪುರದ ಕ್ಷೇತ್ರದ ದೊಡ್ಡಬನಹಳ್ಳಿಯ ಸರ್ಕಾರಿ ಶಾಲೆಯ ಶಿಕ್ಷಕ ನಾಗರಾಜ್ ಅವರು ಆಯ್ಕೆಯಾಗಿದ್ದಾರೆ.
ದೊಡ್ಡಬನಹಳ್ಳಿ ಫ್ರೌಡ ಶಾಲೆಯಲ್ಲಿ ನಾಗರಾಜ್ ಅವರು ವಿಜ್ಞಾನ ವಿಷಯದ ಕುರಿತಂತೆ ಉಪನ್ಯಾಸ ನೀಡುತ್ತಿದ್ದಾರೆ. ಕಳೆದ ಹದಿನೈದು ವರ್ಷಗಳಿಂದ ಶಿಕ್ಷಕರಾಗಿ ಇವರು ಉತ್ತಮ ಸೇವೆ ಸಲ್ಲಿಸಿದ್ದು, ಇದನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ. ಕರ್ನಾಟಕದಲ್ಲಿ ಇವರೊಬ್ಬರನ್ನು ಮಾತ್ರ ಈ ವರ್ಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಶಿಕ್ಷಕರಿಗೆ ಸೆ.5 ರಂದು ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಮೊಟ್ಟ ಮೊದಲಿಗೆ ಶಿಕ್ಷಕರಾಗಿ ಮಹದೇವಪುರ ಕ್ಷೇತ್ರದ ಕಾಡು ಸೊಣ್ಣಪ್ಪನಹಳ್ಳಿ ಸರ್ಕಾರಿ ಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸಿದ ಶಿಕ್ಷಕ ನಾಗರಾಜ್, ಅವರು ಅಲ್ಲಿ 8 ವರ್ಷ ಕೆಲಸ ಮಾಡಿ ನಂತರ ಕೆಆರ್ ಪುರ ಬಿಇಒ ಆಫೀಸ್ನಲ್ಲಿ ಬಿಸಿ ಅಧಿಕಾರಿಯಾಗಿದ್ದರು. ಕಳೆದ ಮೂರು ವರ್ಷಗಳ ಹಿಂದೆ ದೊಡ್ಡಬನಹಳ್ಳಿ ಸರ್ಕಾರಿ ಶಾಲೆಗೆ ವರ್ಗಾವಣೆ ಆಗಿ ವಿಜ್ಞಾನ ವಿಭಾಗದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಿಕ್ಷಕ ನಾಗರಾಜ್ ಅವರ ಉತ್ತಮ ಸೇವೆಯನ್ನು ಕಂಡು ಶಿಕ್ಷಣ ಕ್ಷೇತ್ರಾಧಿಕಾರಿ ಹನುಮಂತರಾಯಪ್ಪ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಹೆಸರನ್ನು ಸೂಚಿಸಿದರು. ಇವರ ಹದಿನೈದು ವರ್ಷಗಳ ಉತ್ತಮ ಶಿಕ್ಷಕ ಸೇವೆಯನ್ನು ನೋಡಿ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯನ್ನು ನೀಡಲಾಗಿದೆ. ಈ ಮೊದಲು 2019-20 ಸಾಲಿನ ಬೆಂಗಳೂರು ದಕ್ಷಿಣ ಜಿಲ್ಲಾ ಮಟ್ಟದ ಅತ್ತ್ಯುತ್ತಮ ಶಿಕ್ಷಕರ ಪ್ರಶಸ್ತಿ ಸಹ ಸಿಕ್ಕಿದೆ.
ಕಳೆದ ಮೂರು ವರ್ಷಗಳಲ್ಲಿ ದೊಡ್ಡಬನಹಳ್ಳಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವಲ್ಲಿ ಇವರ ಪಾತ್ರ ದೊಡ್ಡದಾಗಿದೆ. ಮಕ್ಕಳಿಗೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಪ್ರಯೋಗಾಲಯ, ಬಯೋ ಮಾಡಲ್ ಗ್ಯಾಸ್ ತಯಾರಿಕೆ, ಬಯೋ ವೆಸ್ಟ್ ಯಂತ್ರ ತಯಾರಿಕೆ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಕಲಿಕೆಗಳಿಗೆ ಪ್ರೋತ್ಸಾಹ ನೀಡಿ ಉತ್ತಮ ಹೆಸರು ಪಡೆದುಕೊಂಡಿದ್ದಾರೆ.