ದೊಡ್ಡಬಳ್ಳಾಪುರ: ಕೆಮ್ಮು ನೆಗಡಿಯೆಂದು ಆಸ್ಪತ್ರೆಗೆ ಬಂದಿದ್ದ ರೋಗಿಗೆ 5 ಇಂಜೆಕ್ಷನ್ ಕೊಟ್ಟ ಪರಿಣಾಮ ಆತ ಸಾವನ್ನಪ್ಪಿದ್ದಾನೆಂದು ಆರೋಪಿಸಿ ಮೃತನ ಸಂಬಂಧಿಕರು ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಗಂಗಾಧರಯ್ಯ (75) ಮೃತ ವೃದ್ಧ. ಶನಿವಾರ ರಾತ್ರಿ 7:30 ಕೆಮ್ಮು ನೆಗಡಿಯಿಂದ ಬಳಲುತ್ತಿದ್ದ ಗಂಗಾಧರಯ್ಯನನ್ನು ತಾಲೂಕಿನ ಬಾಶೆಟ್ಟಿಹಳ್ಳಿಯ ರಕ್ಷಿತ ಎನ್ನುವ ಆಸ್ಪತ್ರೆಗೆ ಕರೆತಂದಿದ್ದರು. ವೃದ್ಧನನ್ನು ಪರೀಕ್ಷಿಸಿದ ವೈದ್ಯರು ಮೊದಲು ಐದು ಇಂಜೆಕ್ಷನ್ ನೀಡಿದ್ದರು. ಕೆಲ ಕ್ಷಣಗಳ ನಂತರ ರೋಗಿ ಬೆವರಲು ಶುರು ಮಾಡಿದಾಗ ಮತ್ತೊಂದು ಇಂಜೆಕ್ಷನ್ ನೀಡಿದ್ದರು ಎಂದು ಮೃತನ ಕುಟುಂಬಸ್ಥರು ದೂರಿದ್ದಾರೆ.
ಮರಳಿ ಮನೆಗೆ ಬಂದ ನಂತರ ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಮತ್ತೆ ಅದೇ ಆಸ್ಪತ್ರೆಗೆ ಬಂದಾಗ ಬೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು ಎನ್ನಲಾಗ್ತಿದೆ. ಬೇರೆ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ರೋಗಿ ಸಾವನ್ನಪ್ಪಿದ್ದು, ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅನ್ನೋದು ಮೃತನ ಸಂಬಂಧಿಕರ ಆರೋಪವಾಗಿದೆ.
ಆದ್ರೆ ವೈದ್ಯರು ಈ ಆರೋಪವನ್ನು ತಳ್ಳಿಹಾಕಿದ್ದು, ಮೃತ ವ್ಯಕ್ತಿ ಕೆಲವು ದಿನಗಳ ಹಿಂದೆ ಸ್ಟ್ರೋಕ್ ಗೆ ತುತ್ತಾಗಿದ್ದರು. ಕಫದಿಂದ ಬಳಲುತ್ತಿದ್ದ ಅವರಿಗೆ ಎರಡೇ ಇಂಜೆಕ್ಷನ್ ಕೊಟ್ಟಿರೋದು. ಮನೆಗೆ ಕರ್ಕೊಂಡ್ ಹೋದ ನಂತರ ಅವರಿಗೆ ಜ್ಯೂಸ್ ಕುಡಿಸಿದ್ದಾರೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ಅಲ್ಲದೆ ನಮ್ಮ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದು, ಮೃತ ವ್ಯಕ್ತಿಯ ಮರಣೋತ್ತರ ವರದಿ ಬಂದ ನಂತರ ಸತ್ಯಾಂಶ ಬೆಳಕಿಗೆ ಬರಲಿದೆ. ನಾವು ತಪ್ಪು ಮಾಡಿದ್ರೆ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗುವುದಾಗಿ ಹೇಳಿದ್ದಾರೆ.
ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ. ಪ್ರಕರಣದ ಹಿಂದಿನ ಸತ್ಯಾಸತ್ಯತೆ ಮರಣೋತ್ತರ ವರದಿ ಮೇಲೆ ನಿಂತಿದೆ. ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯತ್ ಡಿಹೆಚ್ ಓ ಗೆ ಪತ್ರ ಬರೆದು ಆಸ್ಪತ್ರೆಗಳ ಅಸಲಿಯತ್ತು ಬಯಲು ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.