ಬೆಂಗಳೂರು : ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸವರಾಜ್ ದಡೇಸುಗೂರು ವಿರುದ್ಧ ಮತ್ತೊಂದು ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಶಾಸಕ ಶಿವರಾಜ್ ತಂಗಡಗಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳಿಗೆ ಹಾಗೂ ಗೃಹ ಸಚಿವರಿಗೂ ಪತ್ರ ಬರೆಯುತ್ತೇನೆ. ಇನ್ನೊಂದು ದಾಖಲೆಯೂ ಇದೆ. ಅದನ್ನೂ ಬಿಡುಗಡೆ ಮಾಡುತ್ತೇನೆ. ಈ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಳಿಯೂ ಚರ್ಚೆ ನಡೆಸಿದ್ದೇನೆ. ಸದನದಲ್ಲಿ ಇದರ ಬಗ್ಗೆ ಚರ್ಚೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.
ಇದೇ ವೇಳೆ ಚುನಾವಣೆಯಲ್ಲಿ ಸೋಲಿನ ಭೀತಿ ನನಗಿದೆಯೋ, ಅವರಿಗಿದೆಯೋ ಎಂಬುದನ್ನು ಕನಕಗಿರಿ ಜನ ನಿರ್ಧರಿಸುತ್ತಾರೆ. ಅವರು ಕೇವಲ ಒಂದು ಬಾರಿ ಗೆದ್ದಿದ್ದಾರೆ. ನಾನು ಎರಡು ಬಾರಿ ಗೆದ್ದಿದ್ದೇನೆ. ಜೊತೆಗೆ ಸರ್ಕಾರ ಹಗರಣದ ಬಗ್ಗೆ ತನಿಖೆ ಮಾಡಲಿ. ಅಕಸ್ಮಾತ್ ನಾನು ಕೊಟ್ಟ ವಿಡಿಯೋ ಸುಳ್ಳಾಗಿದ್ದರೆ ನನಗೆ ಶಿಕ್ಷೆಯಾಗಲಿ. ನಾನು ಸಿದ್ಧನಿದ್ದೇನೆ ಎಂದರು.
ಬಿಜೆಪಿಯವರಿಗೆ ಮಾತನಾಡೋದಕ್ಕೆ ಮಾತ್ರ ತಾಕತ್ತಿದೆ, ಆದರೆ ತನಿಖೆ ಮಾಡಲು ತಾಕತ್ತಿಲ್ಲ. ಆ ಬ್ಯಾಗ್ ನಲ್ಲಿ ಏನಿದೆ ಅನ್ನೋದನ್ನು ತನಿಖೆ ಮಾಡಲಿ ಗೊತ್ತಾಗುತ್ತದೆ. ನಾನು ಈ ಹಿಂದೆ ಬಂದ ಆಡಿಯೋ ಬಗ್ಗೆ ಮಾತನಾಡಲಿಲ್ಲ. ಈಗ ಯುವಕರಿಗೆ ಅನ್ಯಾಯವಾಗಿದೆ ಎಂದು ನಾನು ಈ ಆಡಿಯೋ ಬಗ್ಗೆ ಮಾತನಾಡಿದ್ದೇನೆ. ಹಗರಣದ ಬಗ್ಗೆ ಪ್ರೆಸ್ ಮೀಟ್ ಮಾಡಿದ ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕೊಡುತ್ತಾರೆ. ಹಗರಣದ ಆಡಿಯೋ ಒಪ್ಪಿಕೊಂಡ ದಡೇಸುಗೂರ್ ಗೆ ಯಾಕೆ ನೋಟಿಸ್ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಒಂದೂವರೆ ಅಡಿ ನೀರಲ್ಲಿ ಬೋಟ್ನಲ್ಲಿ ಹೋದರಲ್ಲ ಪುಣ್ಮಾತ್ಮರು ಎಂದ ಸಿಎಂ: ನನ್ನ ಸ್ವಂತ ಬೋಟ್ನಲ್ಲಿ ಹೋಗಿಲ್ಲ ಎಂದ ಸಿದ್ದು