ಬೆಂಗಳೂರು: ಸೋಮವಾರ ದೇಶಾದ್ಯಂತ ವೈದ್ಯರು ಕರೆ ಕೊಟ್ಟಿದ್ದ ಮುಷ್ಕರಕ್ಕೆ ಎಲ್ಲೆಡೆ ಭಾರಿ ಬೆಂಬಲ ವ್ಯಕ್ತವಾಯಿತು. 24 ಗಂಟೆಗಳ ಕಾಲ ಒಪಿಡಿ ಸೇವೆ ಬಂದ್ ಮಾಡಿ ವೈದ್ಯರು ದೇಶ ವ್ಯಾಪಿ ಪ್ರತಿಭಟನೆ ನಡೆಸಿದ್ದರು. ವೈದ್ಯರ ಮುಷ್ಕರ ಮುಗಿದ ಹಿನ್ನೆಲೆ, ಇಂದು ನಗರದಲ್ಲಿ ಎಂದಿನಂತೆ ಬೆಳಗ್ಗೆಯಿಂದಲೇ ಒಪಿಡಿ ಸೇವೆಗಳು ಆರಂಭವಾಗಿವೆ.
ನಗರದೆಲ್ಲೆಡೆ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ಚಿಕಿತ್ಸೆಗೆಂದು ಬರುತ್ತಿದ್ದ ದೃಶ್ಯಗಳು ಕಂಡು ಬಂದವು. ಇನ್ನು ಆಸ್ಪತ್ರೆ ಸೇವೆಗಳಲ್ಲಿ ಯಾವುದೇ ವ್ಯತ್ಯಯವಿಲ್ಲದೇ ಬೆಳಗ್ಗೆ 8 ಗಂಟೆಯಿಂದಲೇ ಒಪಿಡಿ ಸೇವೆಯನ್ನ ವೈದ್ಯರು ಆರಂಭಿಸಿದ್ದಾರೆ.
ಇನ್ನು ನಿನ್ನೆ ಖಾಸಗಿ ವೈದ್ಯರ ಪ್ರತಿಭಟನೆ ಹಿನ್ನೆಲೆ ರೋಗಿಗಳಿಗೆ ತೊಂದರೆ ಆಗದಂತೆ ಆರೋಗ್ಯ ಇಲಾಖೆಯ ಆಯುಕ್ತರಿಂದ ಎಲ್ಲ ವೈದ್ಯರಿಗೆ, ವೈದ್ಯಕೀಯ ಸಿಬ್ಬಂದಿಗೆ ರಜೆಗಳನ್ನ ಕಡಿತಗೊಳಿಸಲಾಗಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಸಿಗದ ಕಾರಣ ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಆಸ್ಪತ್ರೆಗಳಲ್ಲಿ ದೂರು ಮತ್ತು ಸೇವೆಯಲ್ಲಿ ವ್ಯತ್ಯಯ ಉಂಟಾಗಿಲ್ಲ ಎಂದು ಆರೋಗ್ಯ ಇಲಾಖೆಯ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ ಶಿವರಾಜ್ ಸೃಜನ್ ಶೆಟ್ಟಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 48 ಇ-ಆಸ್ಪತ್ರೆಗಳಲ್ಲಿ ಒಪಿಡಿ, ಐಪಿಡಿಗೆ ಸಾಮಾನ್ಯ ದಿನಕ್ಕಿಂತ ಸೋಮವಾರ ಶೇಕಡ 30-50 ರಷ್ಟು ಹೊರ ರೋಗಿಗಳು ಭೇಟಿ ನೀಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಒಟ್ಟಾರೆ ಖಾಸಗಿ ಆಸ್ಪತ್ರೆಗಳ ವೈದ್ಯರ ಪ್ರತಿಭಟನೆಯಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಗಳ ಸಂಖ್ಯೆ ಹೆಚ್ಚಳವಾಗಿತ್ತು. ಇತ್ತ ಖಾಸಗಿ ವೈದ್ಯರ ಪ್ರತಿಭಟನೆಗೆ ಸರ್ಕಾರಿ ವೈದ್ಯ ನೌಕರರ ಸಂಘದಿಂದಲೂ ಬೆಂಬಲ ವ್ಯಕ್ತವಾಗಿತ್ತು.