ಬೆಂಗಳೂರು: ಮಿಂಟೋ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆ, ಕರವೇ ಕಾರ್ಯಕರ್ತರ ಶರಣಾಗತಿ ಕುರಿತ ಸಮಗ್ರ ಮಾಹಿತಿಯನ್ನು ಡಿ ಸಿಎಂ ಅಶ್ವತ್ಥನಾರಾಯಣ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಲುಪಿಸಿದ್ದು, ಪರಿಸ್ಥಿತಿ ನಿಭಾಯಿಸಿ ಸಮಸ್ಯೆ ತಿಳಿಗೊಳಿಸುವ ಭರವಸೆ ನೀಡಿದ್ದಾರೆ.
ಇಂದು ಬೆಳಗ್ಗೆ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದ ಡಿಸಿಎಂ, ಬಿಎಸ್ವೈ ಅವರನ್ನು ಭೇಟಿಯಾಗಿ ತಾವು ಕರವೇ ಜೊತೆ ನಡೆಸಿರುವ ಸಭೆ ಕುರಿತು ಮಾಹಿತಿ ನೀಡಿದರು.
ಇಂದೂ ಕೂಡ ಪ್ರತಿಭಟನೆ ಮುಂದುವರೆದಿದ್ದು, ರಾಜ್ಯದ ಇತರೆಡೆ ಕೂಡ ವೈದ್ಯರು ಪ್ರತಿಭಟನೆ ಹಾದಿ ತುಳಿದಿದ್ದಾರೆ. ಆದರೆ ಸದ್ಯದಲ್ಲೇ ಎಲ್ಲವೂ ತಿಳಿಯಾಗಲಿದೆ, ಕರವೇ ಕಾರ್ಯಕರ್ತರು ಶರಣಾಗುತ್ತಿದ್ದು, ವೈದ್ಯರ ಮುಷ್ಕರ ಸ್ಥಗಿತವಾಗಲಿದೆ ಎಂದು ಸಿಎಂಗೆ ಡಿಸಿಎಂ ಭರವಸೆ ನೀಡಿದ್ದಾರೆ.
ವೈದ್ಯರ ಪ್ರತಿಭಟನೆಯಿಂದ ರೋಗಿಗಳಿಗೆ ಸಮಸ್ಯೆಯಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ, ಸದ್ಯದಲ್ಲೇ ಉಪ ಚುನಾವಣೆ ಎದುರಿಸಬೇಕು ಈ ಸಂದರ್ಭದಲ್ಲಿ ಇಂತಹ ಘಟನೆಗೆ ಆಸ್ಪದ ನೀಡಬಾರದು. ಕೂಡಲೆ ವೈದ್ಯರ ಮುಷ್ಕರ ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಡಿಸಿಎಂಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.