ಬೆಂಗಳೂರು: ವರ್ಷದಲ್ಲಿ ಮೂರು ತಿಂಗಳು ಫಾರಿನ್ ಟ್ರಿಪ್ ಮಾಡುವ ಬದಲು ಸರ್ಕಾರಿ ಆಸ್ಪತ್ರೆಗೆ ಬನ್ನಿ, ಚಿಕಿತ್ಸೆ ನೀಡಿ. ಅದು ನಿಮ್ಮದೇ ಆಸ್ಪತ್ರೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಕರೆ ನೀಡಿದ್ದಾರೆ.
ನಗರದ ಕೆಆರ್ ರೋಡ್ನ ಐಎಂಎನಲ್ಲಿ ಆಯೋಜಿಸಿದ್ದ ವೈದ್ಯರ ದಿನಾಚರಣೆ ವೇಳೆ ಮಾತಾನಾಡಿದ ಸಚಿವ ಶಿವಾನಂದ ಪಾಟೀಲ್, ಮೆಡಿಕಲ್ ಕಾಲೇಜು ಇದ್ದ ಕಡೆ ಆಸ್ಪತ್ರೆಗೂ ಸಮನ್ವಯ ಇರೋದಿಲ್ಲ. ವೈದ್ಯರಲ್ಲೂ ಸಮ್ವನಯದ ಕೊರತೆ ಇದೆ. ಅಷ್ಟೆ ಅಲ್ಲದೆ ವೈದ್ಯರನ್ನು ನಂಬಿ ಬರುವ ರೋಗಿಗಳು ಮತ್ತು ವೈದ್ಯರ ನಡುವೆಯು ಸಮನ್ವಯ ಇಲ್ಲದೇ ಇರುವುದು ಕಂಡು ಬಂದಿದೆ.
ಸುಸಜ್ಜಿತ ಆಸ್ಪತ್ರೆ ಇದ್ದರೂ ಅದನ್ನ ಸರಿಯಾದ ರೀತಿಯಲ್ಲಿ ಬಳಕೆ ಮಾಡುತ್ತಿಲ್ಲ ಎಂದು ಸಚಿವರು ಬೇಸರು ವ್ಯಕ್ತಪಡಿಸಿದರು. ಖಾಸಗಿ ವೈದ್ಯರಿಗೆ ಮನವಿ ಮಾಡಿದ ಸಚಿವರು, ಸರ್ಕಾರಿ ಆಸ್ಪತ್ರೆಗೆ ಬಂದು 2-3 ಗಂಟೆಗಳ ಕಾಲ ಸೇವೆ ನೀಡಿ ಅಂತ ಮನವಿ ಮಾಡಿದರು. ಸಾಕಷ್ಟು ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಇಲ್ಲದಿದ್ದರೂ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ವಿಷಾದದ ಸಂಗತಿ ಅಂದರೆ ಅನುದಾನ ಬಳಸಿಕೊಂಡು ಸರ್ಕಾರಿ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಮತ್ತೆ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸೋದಕ್ಕೆ ಹಿಂದೆ ಮುಂದೆ ನೋಡುತ್ತಾರೆ ಎಂದರು.
ವೈದ್ಯರ ಮೇಲೆ ಹಲ್ಲೆ ಸಂಬಂಧ ಮಾತಾನಾಡಿದ ಅವರು, ದೇಶದ ನಾನಾ ರಾಜ್ಯದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿದೆ. ಆದರೆ ಕರ್ನಾಟಕದಲ್ಲಿ ಸಿಎಂ ಜವಾಬ್ದಾರಿ ತೆಗೆದುಕೊಂಡು, ಹಾಗೆ ಹಲ್ಲೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ ಎಂದರು.
ಇನ್ನು ಇದೇ ವೇಳೆ ವೈದ್ಯ ಕ್ಷೇತ್ರದಲ್ಲಿ ಸಾಧನೆಗೈದ ಮಂಗಳೂರಿನ ಡಾ. ಸಂತೋಷ್ ಸೋಂನ್ಸ್, ಕರ್ಕಳದ ಸುರೇಶ್ ಕೊಡವ, ಶಿವಕುಮಾರ್ ಬಿ., ಕೊಪ್ಪಳದ ಕುಲಕರ್ಣಿ, ಹುಬ್ಬಳಿಯ ಮಹಂತೇಶ, ಗದಗದ ಬಿದಿನಳ, ಬಾಗಲಕೋಟೆಯ ಶಿಂಬುಲಿಂಗ, ಬೆಂಗಳೂರಿನ ಸುರೇಶವರಯ್ಯ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು