ಬೆಂಗಳೂರು: ಎರಡು ವರ್ಷದ ಮಗುವೊಂದು ಆಟ ಆಡುತ್ತಲೇ ಮ್ಯಾಗ್ನೆಟ್ ನುಂಗಿದ್ದು, ಅಯಸ್ಕಾಂತವನ್ನು ಮಗುವಿನ ದೇಹದಿಂದ ಹೊರತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ ,ಮಗು ಆರೋಗ್ಯವಾಗಿದೆ.
ಕಳೆದ 24 ನೇ ತಾರೀಖಿನಂದು 2 ವರ್ಷದ ನಿತ್ಯಾ( ಹೆಸರು ಬದಲಾಯಿಸಲಾಗಿದೆ) ಆಟವಾಡುವಾಗ ಅಯಸ್ಕಾಂತಗಳ ತುಂಡಗಳನ್ನು ನುಂಗಿ ಬಿಟ್ಟಿದ್ದಳು. ಪೋಷಕರು ಕೂಡಲೇ ಮಗುವನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತಕ್ಷಣ ಎಕ್ಸರೆ ಮಾಡಿದಾಗ ಎರಡು ಮ್ಯಾಗ್ನೆಟ್ ನುಂಗಿರುವುದು ತಿಳಿದು ಬಂದಿದೆ. ಒಂದು ಹೊಟ್ಟೆಯೊಳಗೆ ಮತ್ತೊಂದು ಹೊಟ್ಟೆಯ ಕೆಳಭಾಗ ಬಳಿ ಹೋಗಿ ಕುಳಿತಿರುವುದು ತಿಳಿದಿದೆ.
ಈ ಕೇಸ್ ವೈದ್ಯರಿಗೂ ಚಾಲೆಂಜ್ ಆಗಿತ್ತು. ಯಾಕೆಂದರೆ ಮಗು ಸಣ್ಣದು ಜೊತೆಗೆ ಕೊರೊನಾ ಭೀತಿ ಬೇರೆ. ಹೀಗಾಗಿ ವೈದ್ಯರು ಎಂಡೋಸ್ಕೋಪಿಗೆ ಒಳಗಾಗುವಂತೆ ಸಲಹೆ ನೀಡಿದ್ದಾರೆ.. ಆದರೆ ಇದಕ್ಕೆ ಪೋಷಕರು ನಿರಾಕರಿಸಿ, ಪುನಃ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮರುದಿನ ಮತ್ತೆ ಆಸ್ಪತ್ರೆಗೆ ಕರೆತಂದು ಎಕ್ಸರೆ ಮಾಡಿಸಿದಾಗ ಎರಡೂ ಮ್ಯಾಗ್ನೆಟ್ ತುಂಡುಗಳು ಒಟ್ಟಿಗೆ ಇರುವುದು ಕಂಡು ಬಂದಿದೆ. ಕರುಳಿನ ಪದರಗಳ ನಡುವೆ ಬಂದು ಸಂಗ್ರಹವಾಗಿವೆ. ಇದರಿಂದ ಕರುಳಿನಲ್ಲಿ ರಂಧ್ರ ಉಂಟಾಗಬಹುದು, ಜೊತೆಗೆ ಹೊಟ್ಟೆಯಲ್ಲಿ ತೀವ್ರ ಸೋಂಕು ಉಂಟಾಗಿ ಮಗುವಿನ ಜೀವಕ್ಕೆ ಅಪಾಯವಾಗಬಹುದೆಂದು ಎಣಿಸಿ ವೈದ್ಯರು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಈ ಬಗ್ಗೆ ವಿವರಿಸಿದ ಸಕ್ರ ಆಸ್ಪತ್ರೆಯ ಸರ್ಜನ್ ಡಾ. ಅನಿಲ್ ಕುಮಾರ್, ಈ ಮಗು ನಿಜಕ್ಕೂ ಅದೃಷ್ಟವಂತೆ.. ಯಾಕೆಂದರೆ ಮ್ಯಾಗ್ನೆಟ್ ನುಂಗಿದ ತಕ್ಷಣ ಪಾಲಕರು ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದರು. ಒಂದು ದೊಡ್ಡಕರುಳಿನಲ್ಲಿ ಇನ್ನೊಂದು ಸಣ್ಣ ಕರುಳಿನಲ್ಲಿ ಸಿಲುಕಿಕೊಂಡಿತ್ತು.. ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಮೂಲಕ ಅವುಗಳನ್ನು ಹೊರತೆಗೆಯಲಾಯಿತು. ಮಗುವೊಂದು ಅಯಸ್ಕಾಂತಗಳನ್ನು ನುಂಗಿ ಚಿಕಿತ್ಸೆಗೆ ಆಗಮಿಸಿದ ಮೊದಲ ಪ್ರಕರಣ ಇದಾಗಿತ್ತು.. ಆದ್ದರಿಂದ ಇದಕ್ಕೆ ಚಿಕಿತ್ಸೆ ನೀಡುವುದು ನಿಜಕ್ಕೂ ಸವಾಲಾಗಿತ್ತು.. ಸಾಮಾನ್ಯವಾಗಿ ಕಾಯಿನ್, ಆಟಿಕೆ ತುಂಡು, ಪಿನ್ ಮುಂತಾದ ವಸ್ತುಗಳನ್ನ ಮಗು ನುಂಗುವ ಪ್ರಕರಣಗಳು ಬರುತ್ತವೆ. ಆದರೆ, ಈ ಪ್ರಕರಣ ಕೊಂಚ ಅಪರೂಪವಾಗಿತ್ತು.. ಮ್ಯಾಗ್ನೆಟ್ ಅಂದಾಜು 6mm ಗಾತ್ರದಲ್ಲಿ ಇತ್ತು, ಚಿಕಿತ್ಸೆ ವಿಳಂಬವಾಗಿದ್ದರೆ ಹೆಚ್ಚು ಕಷ್ಟವಾಗುತ್ತಿತ್ತು ಅಂತ ತಿಳಿಸಿದರು.
ಪೋಷಕರೇ ಎಚ್ಚರ ವಹಿಸಿ:
ಮಕ್ಕಳು ಚಿಕ್ಕವರಿರುವಾಗ ಹೆಚ್ಚು ಕುತೂಹಲದಿಂದ ಕೂಡಿರುತ್ತಾರೆ ಮತ್ತು ಕಂಡ ಕಂಡದನ್ನ ಬಾಯಿಗೆ ಹಾಕಿಕೊಳ್ಳುತ್ತಾರೆ.. ಹೀಗಾಗಿ, ಸಣ್ಣ ವಸ್ತುಗಳನ್ನು ಮಕ್ಕಳಿಂದ ದೂರವಿಡುವುದು ಒಳಿತು ಅಂತ ವೈದ್ಯರು ಸಲಹೆ ನೀಡುತ್ತಾರೆ. ಇಂತಹ ಸರಳ ವಿಷಯಗಳು ಪ್ರಾಣಕ್ಕೆ ಕುತ್ತು ತಂದು ಒಡ್ಡುತ್ತೆ. ಇದಕ್ಕಾಗಿ ಪ್ರಥಮ ಚಿಕಿತ್ಸೆ ನೀಡಲು ಮುಂದಾಗಬಾರದು. ಮಕ್ಕಳು ಏನಾದರೂ ನುಂಗಿದರೆ ನೇರ ವೈದ್ಯರ ಬಳಿ ಕರೆದುಕೊಂಡು ಹೋಗುವಂತೆ ಮನವಿ ಮಾಡಿದರು. ಬಹುಮುಖ್ಯವಾಗಿ ಮಗು ವಸ್ತುವನ್ನ ನುಂಗಿದರೆ ನೀವೇ ಹೊರತೆಗೆಯಲು ಪ್ರಯತ್ನಸಬೇಡಿ ಅಂತಲೂ ಎಚ್ಚರಿಕೆ ನೀಡಿದರು. ಸದ್ಯ ಮಗುವಿನ ಆರೋಗ್ಯ ಉತ್ತಮವಾಗಿದ್ದು, ಸಕ್ರ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಚಿಕಿತ್ಸೆ ಮಾಡಿದ್ದಾರೆ. ನಿಮ್ಮ ಮಕ್ಕಳಿಗೂ ಆಡಲು ಆಟಿಕೆ ಕೊಡುವಾಗ ಎಚ್ಚರಿಕೆ ವಹಿಸಿ.