ಬೆಂಗಳೂರು: ರಾಜ್ಯದಲ್ಲಿ ವಿಧಾನಾಸಭೆ ಚುನಾವಣೆ ಕಾವು ಜೋರಾಗುತ್ತಿದೆ. ರಾಜಕೀಯ ಚಟುವಟಿಕೆಗಳಲ್ಲಿ ತಲ್ಲಣವಾಗಿರುವ ಬಿಜೆಪಿ ರಾತ್ರೋರಾತ್ರಿ ತನ್ನ ಎರಡನೇ ಪಟ್ಟಿ ರಿಲೀಸ್ ಮಾಡಿ ಏಳು ಹಾಲಿ ಶಾಸಕರಿಗೆ ಶಾಕ್ ನೀಡಿದೆ. ಅವರ ವಿವರ ಇಲ್ಲಿದೆ ನೋಡಿ..
2ನೇ ಪಟ್ಟಿಯಲ್ಲಿ ಪ್ರಮುಖವಾಗಿ ಜೈಲು ಶಿಕ್ಷೆಗೆ ಗುರಿಯಾಗಿ ಕಾನೂನು ಹೋರಾಟ ನಡೆಸುತ್ತಿರುವ ಹಾವೇರಿ ಶಾಸಕ ನೆಹರೂ ಓಲೆಕಾರ್, ಲಂಚ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಕಲಘಟಗಿಯ ನಿಂಬಣ್ಣನವರ್, ವಿವಾದದಿಂದಾಗಿ ಕ್ಷೇತ್ರದ ಕಾರ್ಯಕರ್ತರ ಅಸಮಧಾನಕ್ಕೊಳಗಾಗಿರುವ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ, ಬೈಂದೂರಿನ ಸುಕುಮಾರಶೆಟ್ಟಿ, ಚುನಾವಣೆಗೆ ನಿಲ್ಲುವುದಿಲ್ಲ ಎಂದು ಪ್ರಕಟಿಸಿದ್ದ ದಾವಣಗೆರೆ ಉತ್ತರ ಶಾಸಕ ಎಸ್. ಎ. ರವೀಂದ್ರನಾಥ್ ಮತ್ತು ಮಾಯಕೊಂಡ ಕ್ಷೇತ್ರದ ಶಾಸಕ ಲಿಂಗಣ್ಣಗೆ ಈ ಬಾರಿ ಬಿಜೆಪಿ ಕೊಕ್ ನೀಡಲಾಗಿದೆ.
ಮೂಡಿಗೆರೆ ಎಸ್ ಸಿ ಮೀಸಲು ಕ್ಷೇತ್ರಕ್ಕೆ ದೀಪಕ್ಗೆ ಟಿಕೆಟ್: ಜಿಲ್ಲೆಯಲ್ಲೇ ಅಲ್ಲದೇ ರಾಜ್ಯ ಮಟ್ಟದಲ್ಲೇ ಅತ್ಯಂತ ಹೆಚ್ಚು ಸುದ್ದಿ ಮಾಡಿದ್ದ ಮೂಡಿಗೆರೆ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದ ಟಿಕೆಟ್ ಬಿಜೆಪಿಯ ತಳ ಮಟ್ಟದ ಕಾರ್ಯಕರ್ತರ ನಿರೀಕ್ಷೆಯಂತೆ ಬಿಜೆಪಿ ಹಾಲಿ ಶಾಸಕ ಎಂ ಪಿ ಕುಮಾರಸ್ವಾಮಿಗೆ ಟಿಕೆಟ್ ನೀಡದೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಅವರಿಗೆ ಮಣೆ ಹಾಕಿದೆ. ಈ ಮೂಲಕ ಬಿಜೆಪಿ ಕಾರ್ಯಕರ್ತರ ಪಕ್ಷ ಎಂದು ಸಾಬೀತು ಪಡಿಸಿದಂತಾಗಿದೆ. ಶಾಸಕ ಎಂಪಿಕೆಗೆ ಟಿಕೆಟ್ ನೀಡಬಾರದೆಂದು ಪಕ್ಷದ ಕಾರ್ಯಕರ್ತರೇ ಪಟ್ಟು ಹಿಡಿದಿದ್ದು, ಗಮನಾರ್ಹ.
ಕಲಘಟಗಿ ಕ್ಷೇತ್ರಕ್ಕೆ ನಾಗರಾಜ್ ಛಬ್ಬಿ: ಕಾಂಗ್ರೆಸ್ ತೊರೆದ ಕಮಲ ಬಾವುಟ ಹಿಡಿದಿದ್ದ ಮಾಜಿ ಎಂಎಲ್ಸಿ ನಾಗರಾಜ ಛಬ್ಬಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಕಾಂಗ್ರೆಸ್ ಟಿಕೆಟ್ ವಂಚಿತ ನಾಗರಾಜ ಛಬ್ಬಿಗೆ ಬಿಜೆಪಿಗೆ ಕಳೆದ ನಾಲ್ಕು ದಿನಗಳ ಹಿಂದೆ ಸೇರ್ಪಡೆಯಾಗಿದ್ದರು. ಛಬ್ಬಿಗೆ ಮಣೆ ಹಾಕಿದ್ದು, ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಬಿಜೆಪಿ ನಾಯಕರು ಅವಕಾಶ ಕಲ್ಪಿಸಿದ್ದಾರೆ. ಈಗಾಗಲೇ ಹಾಲಿ ಶಾಸಕ ಸಿಎಂ ನಿಂಬಣ್ಣವರ ಅವರಿಗೆ ಟಿಕೆಟ್ ತಪ್ಪಿಸಿ ನಾಗರಾಜ ಛಬ್ಬಿಗೆ ಟಿಕೆಟ್ ನೀಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಹಾವೇರಿಯಲ್ಲಿ ಓಲೆಕಾರ್ಗೆ ಕೈತಪ್ಪಿದ ಟಿಕೆಟ್: ಜೈಲು ಶಿಕ್ಷೆಗೆ ಗುರಿಯಾಗಿ ಕಾನೂನು ಹೋರಾಟ ನಡೆಸುತ್ತಿರುವ ಹಾವೇರಿ ಶಾಸಕ ನೆಹರೂ ಓಲೆಕಾರ್ಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿಲ್ಲ. ಅವರ ಬದಲಿಗೆ ಗವಿಸಿದ್ದಪ್ಪ ದ್ಯಾಮಣ್ಣನವರ್ ಬಿಜೆಪಿ ಮಣೆ ಹಾಕಿದೆ. ಬಿಜೆಪಿಯ ಎರಡನೇಯ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದಕ್ಕೆ ಓಲೇಕಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದಲ್ಲದೇ ಸಿಎಂ ಬಸವರಾಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಮೂವರು ಶಾಸಕರಿಗೆ ಕೊಕ್: ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಹಾಲಿ ಶಾಸಕ ಎಸ್ಎ ರವೀಂದ್ರನಾಥ್ ಬದಲಿಗೆ ಹೊಸ ಮುಖವಾದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ಗೆ ಟಿಕೆಟ್ ನೀಡಿದೆ. ಇನ್ನು ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅಚ್ಚರಿಯಂತೆ ಮಾಡಾಳ್ ವಿರೂಪಾಕ್ಷಪ್ಪನವರ ಹಿರಿಯ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಬಿಜೆಪಿ ಚನ್ನಗಿರಿ ಕ್ಷೇತ್ರಕ್ಕೆ ಮಾಜಿ ತುಮ್ಕೋಸ್ ಅಧ್ಯಕ್ಷ ಹೆಚ್ಎಸ್ ಶಿವಕುಮಾರ್ ಅವರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಮಾಡಾಳ್ ಕುಟುಂಬಕ್ಕೆ ಟಿಕೆಟ್ ಕೈತಪ್ಪಿದೆ. ಮಾಯಕೊಂಡ ಕ್ಷೇತ್ರದಲ್ಲಿ ಹಾಲಿ ಶಾಸಕ ಪ್ರೋ ಲಿಂಗಣ್ಣನವರಿಗೂ ಟಿಕೆಟ್ ಕೈ ತಪ್ಪಿದ್ದು, ಇವರ ಬದಲಿಗೆ ಮಾಜಿ ಶಾಸಕ ಬಸವರಾಜ್ ನಾಯ್ಕ್ಗೆ ಟಿಕೆಟ್ ನೀಡಿ ಆಕಾಂಕ್ಷಿಗಳಿಗೆ ಟಕ್ಕರ್ ನೀಡಲಾಗಿದೆ.
ಬೈಂದೂರಿನಲ್ಲಿ ಗುರುರಾಜ್ ಗಂಟಿಹೊಳೆಗೆ ಒಲಿದ ಭಾಗ್ಯ: ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರದಲ್ಲಿ ಐದು ಕಡೆಯೂ ಬಿಜೆಪಿ ಶಾಸಕರಿದ್ದಾರೆ. ಇದರಲ್ಲಿ ಮಂಗಳವಾರ ನಾಲ್ಕು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ನಾಲ್ಕು ಕ್ಷೇತ್ರದಲ್ಲಿ ಮೂವರನ್ನು ಬದಲಾವಣೆ ಮಾಡಿರುವುದು ವಿಶೇಷ. ಉಡುಪಿ ಕ್ಷೇತ್ರದ ಶಾಸಕ ರಘುಪತಿ ಭಟ್, ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್, ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಹಿನ್ನೆಲೆ ಬೇರೆಯವರಿಗೆ ಟಿಕೆಟ್ ನೀಡಲಾಗಿತ್ತು. ಈಗ ಎರಡನೇ ಪಟ್ಟಿಯಲ್ಲಿ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ ಅಲ್ಲಿಂದ ಗುರುರಾಜ್ ಗಂಟಿಹೊಳಿ ಅವರನ್ನು ಕಣಕ್ಕಿಳಿಸಿದೆ. ಈ ಮೂಲಕ ಬಿಜೆಪಿ ಪಕ್ಷ ಕರಾವಳಿ ಭಾಗದಲ್ಲಿ ಹೊಸ ಮುಖಗಳ ಪರಿಚಯ ಮುಂದುವರಿಸಿದೆ.
ಓದಿ: ಮೂಡಿಗೆರೆ ಟಿಕೆಟ್ ಮಿಸ್: ಶಾಸಕ ಸ್ಥಾನಕ್ಕೆ ರಾಜೀನಾಮೆ, ಬಿಜೆಪಿಗೂ ಗುಡ್ ಬೈ ಹೇಳಿದ ಎಂಪಿ ಕುಮಾರಸ್ವಾಮಿ