ಬೆಂಗಳೂರು: ಕೇಂದ್ರದ ವಿದ್ಯುತ್ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಬೇಡಿ ಎಂದು ಕೆಪಿಸಿಸಿ ಕಿಸಾನ್ ಘಟಕ ಅಧ್ಯಕ್ಷ ಸಚಿನ್ ಮಿಗಾ ಸಿಎಂಗೆ ಪತ್ರ ಬರೆದಿದ್ದಾರೆ.
ಇದು ರೈತ ವಿರೋಧಿ ಮಸೂದೆಯಾಗಿದೆ. ರಾಜ್ಯದ ರೈತರಿಗೆ ಉಚಿತ ವಿದ್ಯುತ್ ಲಭ್ಯವಾಗುತ್ತಿದೆ. ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಸಿಗುತ್ತಿದೆ. ಕೇಂದ್ರದ ಈ ಕಾಯ್ದೆ ಅದನ್ನ ರದ್ದು ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಉದ್ಯಮಿ ಗೌತಮ್ ಅದಾನಿಗೆ ನೆರವು ಮಾಡಿಕೊಡಲು ಈ ಮಸೂದೆಯನ್ನು ತರಲಾಗುತ್ತಿದೆ. ಆ ಮೂಲಕ ರೈತರ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟ ಆಡುತ್ತಿದೆ. ಈಗಾಗಲೇ ರೈತ ವಿರೋಧಿ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ. ಆ ಮೂಲಕ ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಹೀಗಾಗಿ ವಿದ್ಯುತ್ ತಿದ್ದುಪಡಿ ಮಸೂದೆಗೆ ಒಪ್ಪಬೇಡಿ. ರಾಜ್ಯದ ರೈತ ಮುಖಂಡರ ಜೊತೆಗೂ ಚರ್ಚೆ ನಡೆಸಿ, ಅವರ ಅಭಿಪ್ರಾಯ ಪಡೆಯುವುದು ಅತ್ಯಗತ್ಯವಾಗಿದೆ. ಒಂದು ವೇಳೆ ರಾಜ್ಯ ಸರ್ಕಾರ ಮಸೂದೆಗೆ ಒಪ್ಪಿದ್ದೇ ಆದರೆ ರಾಜ್ಯದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.