ಬೆಂಗಳೂರು: ಅನರ್ಹ ಶಾಸಕರನ್ನು ತಬ್ಬಲಿ ಮಾಡಬೇಡಿ. ಅವರಿಗೆ ಒಳ್ಳೊಳ್ಳೆ ಸ್ಥಾನ ನೀಡಿ. ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ವಿಧಾನಸಭೆ ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಇಂದಿನಿಂದ ಹೊಸ ಅಧ್ಯಾಯ ಶುರುವಾಗಿದೆ. ಯಡಿಯೂರಪ್ಪ ಅವರಲ್ಲಿ ಒಂದು ಮನವಿ ಮಾಡುತ್ತೇನೆ. 15 ಜನ ಶಾಸಕರು ನಿಮ್ಮನ್ನ ರಕ್ಷಣೆ ಮಾಡಿದ್ದಾರೆ. ಅವರಿಗೆ ಸದನದಲ್ಲಿ ಸಿಎಂ ಕೃತಜ್ಞತೆ ಕೂಡ ಸಲ್ಲಿಸಲಿಲ್ಲ. ಕಡೇಪಕ್ಷ ನೀವು ಅವರಿಗೆ ಏನು ಮಾತು ಕೊಟ್ಟಿದ್ದೀರೋ ಅದನ್ನು ಉಳಿಸಿಕೊಳ್ಳಿ. ಅವರಿಗೆಲ್ಲ ಒಳ್ಳೊಳ್ಳೆ ಸ್ಥಾನ ನೀಡಿ ನಿಮ್ಮ ಜೊತೆಯಲ್ಲಿಯೇ ಇಟ್ಟುಕೊಳ್ಳಿ. ಅವರನ್ನು ತಬ್ಬಲಿಮಾಡಬೇಡಿ ಎಂದು ಕುಟುಕಿದ್ದಾರೆ.
ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ನಾನು ಅರ್ಜಿ ಹಾಕಿ ಕುಳಿತಿಲ್ಲ. ಅದರ ಅವಶ್ಯಕತೆ ನನಗಿಲ್ಲ. ಪಕ್ಷದ ವರಿಷ್ಠರು ಇದನ್ನು ತೀರ್ಮಾನಿಸುತ್ತಾರೆ ಎಂದರು.