ಬೆಂಗಳೂರು: ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಆರೋಗ್ಯ ಹಸ್ತ ಸಮಿತಿ ಸಭೆ ನಡೆಸಿದರು.
ಈ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಐಟಿ ವಿಭಾಗ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಮಾಜಿ ಸಂಸದರಾದ ಧ್ರುವನಾರಾಯಣ ಮತ್ತು ಬಿ.ಎನ್. ಚಂದ್ರಪ್ಪ, ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥ ಬಿ.ಎಲ್. ಶಂಕರ್ ಮತ್ತು ಸಹ ಅಧ್ಯಕ್ಷರಾದ ಸುದರ್ಶನ್, ಶಾಸಕರಾದ ಅಜಯ್ ಸಿಂಗ್ ಮತ್ತಿತರರು ಭಾಗಿಯಾಗಿದ್ದರು.
ಕಾಂಗ್ರೆಸ್ ಪಕ್ಷ ಆರಂಭಿಸಿರುವ ಆರೋಗ್ಯ ಹಸ್ತ ಸಮಿತಿ ಮೂಲಕ ಕೈಗೊಳ್ಳಬಹುದಾದ ಕ್ರಮಗಳು, ಜನರನ್ನು ತಲುಪುವ ರೀತಿ, ಪಕ್ಷದ ಯೋಜನೆಯನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವುದು, ಮುಂಬರುವ ದಿನಗಳಲ್ಲಿ ಈ ಒಂದು ಯೋಜನೆ ರಾಜ್ಯದ ಜನರ ಗಮನ ಸೆಳೆಯುವಂತೆ ಮಾಡುವುದು. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಪಕ್ಷದ ವಿಚಾರವಾಗಿ ಧನಾತ್ಮಕವಾಗಿ ಯೋಚಿಸುವಂತೆ ಮಾಡುವ ಉದ್ದೇಶ ಹೊಂದಲಾಗಿದ್ದು, ಇದನ್ನು ಸಮರ್ಪಕವಾಗಿ ನಮ್ಮ ತಂಡ ಜಾರಿಗೆ ತರಬೇಕೆಂದು ಡಿಕೆಶಿ ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದರು.
ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಸಂದರ್ಭ ಪಕ್ಷದ ಆರೋಗ್ಯ ಘಟಕ ನಿರ್ವಹಿಸಿದ ಕಾರ್ಯ ಜನರ ಮೆಚ್ಚುಗೆ ಗಳಿಸಿದೆ. ಈ ಹಿನ್ನೆಲೆ ಈಗ ಸಿದ್ಧಪಡಿಸಿರುವ ಆರೋಗ್ಯ ಹಸ್ತ ಸಮಿತಿ ಕೂಡ ಇದೇ ನಿಟ್ಟಿನಲ್ಲಿ ಜನರ ವಿಶ್ವಾಸಗಳಿಸುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.