ಬೆಂಗಳೂರು: ಏಟ್ರಿಯಾ ಹೋಟೆಲ್ ಫೌಂಡೇಷನ್ ವತಿಯಿಂದ ಪ್ರತಿನಿತ್ಯ ಬಡವರಿಗೆ ಊಟ ವಿತರಿಸಲು ನಿರ್ಮಿಸಲಾಗಿರುವ ಆಹಾರ ತಯಾರಿಕಾ ಕೇಂದ್ರಗಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಗಳೂರಿನ ಏಟ್ರಿಯಾ ಹೋಟೆಲ್ ಶಂಕರ ಮಠದಲ್ಲಿರುವ ಆಹಾರ ತಯಾರಿಕಾ ಕೇಂದ್ರದಲ್ಲಿ ಲಾಕ್ಡೌನ್ ಆರಂಭದ ದಿನದಿಂದಲೂ ಆಹಾರ ತಯಾರಿಸಿ ಬಡವರಿಗೆ ವಿತರಿಸುವ ಕಾರ್ಯ ಮಾಡುತ್ತಿದೆ. ಸಾವಿರಾರು ಮಂದಿ ಇದರ ಅನುಕೂಲ ಪಡೆಯುತ್ತಿದ್ದಾರೆ.
ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಏಟ್ರಿಯಾ ಫೌಂಡೇಷನ್ ವತಿಯಿಂದ ನಗರದ 16 ಕಡೆಗಳಲ್ಲಿ ಆಹಾರ ತಯಾರಿಕಾ ಕೇಂದ್ರ ಸ್ಥಾಪಿಸಿ ಪ್ರತಿನಿತ್ಯ 1.70 ಲಕ್ಷ ಜನ ಬಡವರಿಗೆ ಊಟ ವಿತರಿಸಿ ಮಾನವ ಸೇವೆಯನ್ನು ಮಾಡುತ್ತಿದ್ದಾರೆ. ಬೆಳಗ್ಗೆ ಏಟ್ರಿಯಾ ಪಂಚತಾರಾ ಹೋಟೆಲ್ ಆಹಾರ ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿ, ನಂತರ ಶಂಕರಮಠದ ಆಹಾರ ತಯಾರಿಕಾ ಕೇಂದ್ರಕ್ಕೆ ಬಂದಿದ್ದೇನೆ. ಇಲ್ಲಿ ವೈದ್ಯರು, ಬ್ಯಾಂಕ್ ಸಿಬ್ಬಂದಿ, ಪುರೋಹಿತರು, ಹೆಣ್ಣುಮಕ್ಕಳು ಸೇರಿದಂತೆ ಎಲ್ಲ ವರ್ಗದವರು ಇಂದು ಈ ಸೇವೆಯಲ್ಲಿ ಕೈಜೋಡಿಸುತ್ತಿರುವುದನ್ನು ನೋಡಿ ಸಂತೋಷವಾಯಿತು ಎಂದರು.
ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಇವರು ಅಮೋಘ ಸೇವೆ ಮಾಡುತ್ತಿದ್ದಾರೆ. ನಾನು ಇದನ್ನು ಕಣ್ಣಾರೇ ನೋಡಿ, ಅಭಿನಂದಿಸಬೇಕು, ಶುಭ ಹಾರೈಸಬೇಕು ಎಂದು ಇಲ್ಲಿಗೆ ಭೇಟಿ ನೀಡಿದ್ದೇನೆ’ ಎಂದರು. ಏಟ್ರಿಯಾ ಫೌಂಡೇಷನ್ ಅವರು ಲಾಕ್ಡೌನ್ ಅವಧಿಯಲ್ಲಿ ಇದುವರೆಗೂ 37,38,616 ಊಟಗಳನ್ನು ಹಸಿದವರಿಗೆ ಹಂಚಿದ್ದಾರೆ.