ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಎಷ್ಟು ಬಾರಿ ಬೇಕಾದರೂ ಟೂರ್ ಬರಲಿ. ದಿನಾ ಇಲ್ಲೇ ಇರಲಿ, ನಮಗೆ ಬೇಜಾರಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅವರ ಪಾರ್ಟಿ ವೀಕ್ ಆಗಿದೆ ಅಂತಾ ಅರ್ಥ ಆಗಿದೆ. ಅವರದ್ದು 60-65 ಸೀಟ್ ಅಷ್ಟೇ. ಸೋಲನ್ನ ಒಪ್ಪಿಕೊಳ್ತಿದ್ದಾರೆ. ಏನೋ ಮೇಕಪ್ ಮಾಡೋಕೆ ಮೋದಿ ಬರ್ತಿದ್ದಾರೆ. ಜನ ಸೇರಲ್ಲ ಅಂತಾ ಚಿತ್ರನಟರನ್ನೂ ಕರೆಸ್ತಾ ಇದ್ದಾರೆ ಎಂದು ಲೇವಡಿ ಮಾಡಿದರು.
ಗುಜರಾತ್ನಿಂದ ಬಂದು ಮಿಕ್ಸ್ ಮಾಡ್ತಿದ್ದಾರೆ- ಡಿಕೆಶಿ.. ನಮ್ಮ ಪಕ್ಷದ ಸ್ಟಾರ್ ಕ್ಯಾಂಪೇನರ್ ಯಾರೆಂದು ಸದ್ಯದಲ್ಲೇ ತಿಳಿಸುತ್ತೇವೆ ಎಂದ ಡಿಕೆಶಿ, ಅಮುಲ್ ವಿರುದ್ಧ ಕ್ಯಾಂಪೇನ್ ಕುರಿತು ಮಾತನಾಡಿದರು. ನಂದಿನಿ ನಮ್ಮದು. 80 ಲಕ್ಷ ರೈತರು ಹಸುಗಳನ್ನ ಸಾಕುತ್ತಿದ್ದಾರೆ. ರೈತರ ಹಾಲಿಗೆ ಕಡಿಮೆ ಬೆಲೆ ಕೊಡ್ತಿದ್ದಾರೆ. ನಂದಿನಿ ಬ್ರ್ಯಾಂಡ್ ಏನ್ ಕಡಿಮೆ ಇದೆ. ಗುಜರಾತ್ ನಿಂದ ಬಂದು ಮಿಕ್ಸ್ ಮಾಡ್ತಿದ್ದಾರೆ. ನಮ್ಮ ರೈತರಿಗೆ ಮೊದಲು ಬೆಲೆ ಕೊಡಬೇಕು. ಈ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು. ಎಸ್ ಟಿ ಸೋಮಶೇಖರ್ ಕೈಲಿ ಏನೂ ಇಲ್ಲ. ಮಿಲ್ಕ್ ಮಿನಿಸ್ಟರ್ ಕೈಯಲ್ಲೂ ಏನೂ ಆಗ್ತಿಲ್ಲ. ಅವರೆಲ್ಲಾ ಕೈಗೆ ಬಳೆ ತೊಟ್ಟುಕೊಂಡಿದ್ದಾರೆ ಎಂದು ಡಿಕೆಶಿ ಕಿಡಿಕಾರಿದರು.
ನಮ್ಮ ಅಭ್ಯರ್ಥಿಗಳ ಮೇಲೆ ಐಟಿ, ಇಡಿ ರೇಡ್ ಮಾಡಿಸ್ತಿದ್ದಾರೆ - ಡಿಕೆಶಿ: ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ವಿಚಾರ ಮಾತನಾಡಿದ ಡಿಕೆಶಿ, ನಮ್ಮ ಪಾರ್ಟಿ ಸಮುದ್ರ. ನೂರಾರು ಹೊಳೆಗಳು ಬಂದು ಸೇರಿಕೊಳ್ತಾವೆ. ಎಷ್ಟು ಜನ ಬೇರೆ ಪಾರ್ಟಿಗಳಿಂದ ಕಾಂಗ್ರೆಸ್ಗೆ ಬಂದಿಲ್ವಾ? ನಾಳೆ ಶಿವಲಿಂಗೇಗೌಡ ಪಕ್ಷ ಸೇರ್ತಿದ್ದಾರೆ. ನಾನು ಹೋಗ್ತಿದ್ದೀನಿ ಎಂದರು. ಬಿಜೆಪಿಯವರ ಮೇಲೆ ಏನೂ ಮಾಡ್ತಿಲ್ಲ. ನಮ್ಮ ಅಭ್ಯರ್ಥಿಗಳ ಮೇಲೆ ಐಟಿ, ಇಡಿ ರೇಡ್ ಮಾಡಿಸ್ತಿದ್ದಾರೆ. ಕೆಲವು ಪೊಲೀಸರು ಏಜೆಂಟ್ ಗಳಾಗಿ ಬಿಟ್ಟಿದ್ದಾರೆ. ನಮ್ಮ ಕಾರ್ಯಕರ್ತರನ್ನ ಬೆದರಿಸಿ ಕೇಸ್ ಹಾಕ್ತಿದ್ದಾರೆ. ಅಂಥಹ ಪೊಲೀಸ್ ಆಫೀಸರ್ಗಳ ಲಿಸ್ಟ್ ತಯಾರಿ ಮಾಡೋಕೆ ಹೇಳಿದ್ದೇನೆ. ಮೇ 15 ಕ್ಕೆ ನಿಮಗೆ ಎಲ್ಲಾ ಗೊತ್ತಾಗುತ್ತೆ ಎಂದು ಎಚ್ಚರಿಸಿದರು.
ನಾನು ಆಟೋ ಡ್ರೈವರ್ಗಳ ಸಮಸ್ಯೆ ಕೇಳಿದ್ದೆ. ಪೆಟ್ರೋಲ್, ಡೀಸೆಲ್ ಏರಿಕೆ ಸಮಸ್ಯೆ ಬಗ್ಗೆ ಹೇಳಿದ್ರು. ಬಹುತೇಕರು ಕಾಂಗ್ರೆಸ್ ಸ್ಟಿಕರ್ ಆಟೋಗಳ ಮೇಲೆ ಹಾಕಿಕೊಂಡಿದ್ದಾರೆ. ಅದನ್ನ ಹಾಕಿಕೊಳ್ಳಬೇಡಿ ಅಂತಾ ಕಾನೂನು ಎಲ್ಲಿದೆ. ಆಟೋ ಡ್ರೈವರ್ ಗಳಿಗೆ ಐದು ಸಾವಿರ ಫೈನ್ ಹಾಕ್ತಾ ಇದ್ದಾರೆ. ಗಾಡಿ ಸೀಜ್ ಮಾಡ್ತಿದ್ದಾರೆ. ನೀವ್ಯಾರ್ರೀ ಸೀಜ್ ಮಾಡೋಕೆ? ನನ್ನ ಗಾಡಿ ಮೇಲೆ ನಾನು ಬಾವುಟ ಹಾಕಿಕೊಳ್ತೀನಿ. ನೀವ್ಯಾರು ನನಗೆ ದಂಡ ಹಾಕೋಕೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ಕೊಡ್ತೀನಿ ಎಂದು ಹೇಳಿದರು.
ಸತ್ಯಮೇವ ಜಯತೆ ಸಮಾವೇಶ ಮುಂದೂಡಿಕೆ ವಿಚಾರ ಕುರಿತು ಮಾತನಾಡಿದ ಡಿ ಕೆ ಶಿವಕುಮಾರ್, ನಮ್ಮ ಅಭ್ಯರ್ಥಿಗಳು ಫೈನಲ್ ಆಗಬೇಕಿದೆ. ನಂತರ ಸತ್ಯಮೇವ ಜಯತೆ ಸಮಾವೇಶ ಆಗುತ್ತೆ ಎಂದರು.
ಇದನ್ನೂ ಓದಿ:ಸುದೀಪ್ ಟೀಕಿಸುವ ಮೂಲಕ ಕನ್ನಡಿಗರಿಗೆ ಕಾಂಗ್ರೆಸ್, ಜೆಡಿಎಸ್ ಅಪಮಾನ ಮಾಡಿದೆ: ಗೌರವ್ ಭಾಟಿಯಾ