ಬೆಂಗಳೂರು: ಕೊರೊನಾ ದೃಢಪಟ್ಟ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿರುವ ರಂಭಾಪುರಿ ಶ್ರೀಗಳ ಶೀಘ್ರ ಚೇತರಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಡಿಕೆಶಿ, ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರಿಗೆ ಕೊರೊನಾ ಸೋಂಕು ತಗುಲಿರುವ ವಿಚಾರ ತಿಳಿದು ಬಂದಿದೆ. ಅವರು ಶೀಘ್ರವೇ ಗುಣಮುಖರಾಗಿ, ಆರೋಗ್ಯಯುತವಾಗಿ ಮರಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿರುವ ರಂಭಾಪುರಿ ಶ್ರೀಗಳು ನಿನ್ನೆಯಿಂದ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಶತಾಯುಷಿ ಪೂಜ್ಯ ಡಾ. ಶಿವಲಿಂಗ ಶಿವಾಚಾರ್ಯರು ನಿನ್ನೆ ನಿಧನರಾದ ಹಿನ್ನೆಲೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬಸವತತ್ವ ನಿಷ್ಠರಾಗಿ ಮನೆ-ಮನಗಳಲ್ಲಿ ಶರಣರ ತತ್ವ, ಆದರ್ಶಗಳನ್ನು ಬೆಳೆಸುತ್ತಾ, ಎಲ್ಲರನ್ನೂ ಒಗ್ಗೂಡಿಸುತ್ತಿದ್ದ ರಾಷ್ಟ್ರ ಸಂತ ಎಂದೇ ಖ್ಯಾತರಾಗಿದ್ದ ಶತಾಯುಷಿ ಪೂಜ್ಯ ಡಾ. ಶಿವಲಿಂಗ ಶಿವಾಚಾರ್ಯರು ನಿಧನರಾದ ಸುದ್ದಿ ಅತೀವ ನೋವಿನ ಸಂಗತಿ. ಅವರ ನಿಧನದಿಂದ ಕೇವಲ ಕರ್ನಾಟಕ, ಮಹಾರಾಷ್ಟ್ರವಲ್ಲ ಇಡೀ ರಾಷ್ಟ್ರದಾದ್ಯಂತ ಭಕ್ತವೃಂದ ಶೋಕದಲ್ಲಿ ಮುಳುಗಿದ್ದಾರೆ ಎಂದಿದ್ದಾರೆ.