ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುರುವಾರ ಸಿಎಂ ಬಿಎಸ್ ಯಡಿಯೂರಪ್ಪರನ್ನ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಕುತೂಹಲ ಮೂಡಿಸಿದರು.
ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಡಿಕೆ ಶಿವಕುಮಾರ್ ಅವರು ಸಿಎಂ ನಿವಾಸಕ್ಕೆ ತೆರಳಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ರಾಜಕೀಯ ಬದ್ಧ ವೈರಿಗಳಾಗಿರುವ ಉಭಯ ನಾಯಕರು ಒಂದೆಡೆ ಭೇಟಿಯಾದದ್ದು ಸಾಕಷ್ಟು ಕುತೂಹಲ ಮೂಡಿಸಿತ್ತು. ಆದರೆ ಅಸಲಿ ವಿಷಯ ಏನೆಂದರೆ ಪುತ್ರಿಯ ವಿವಾಹ ನಿಶ್ಚಯ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗುರುವಾರ ಯಡಿಯೂರಪ್ಪರನ್ನ ಭೇಟಿ ಮಾಡಿ ವಿವಾಹಕ್ಕೆ ಆಮಂತ್ರಣ ನೀಡಿದ್ದಾರೆ.
ಆಮಂತ್ರಣ ನೀಡುವ ಉದ್ದೇಶದಿಂದ ಬೆಳಗ್ಗೆ ಸಿಎಂ ನಿವಾಸ ಕಾವೇರಿಗೆ ಭೇಟಿಕೊಟ್ಟಿದ್ದರು. ಫೆಬ್ರುವರಿ 14 ಮತ್ತು 15 ರಂದು ನಗರದಲ್ಲಿ ಪುತ್ರಿಯ ವಿವಾಹವನ್ನು ಹಮ್ಮಿಕೊಂಡಿರುವ ಡಿಕೆ ಶಿವಕುಮಾರ್ ಕಳೆದ 20 ದಿನಗಳಿಂದ ಕೆಪಿಸಿಸಿ ಕಚೇರಿಯಲ್ಲಿ ನಿಯಮಿತವಾಗಿ ಕಾಣಿಸುತ್ತಿಲ್ಲ. ನಗರದ ಹಾಗೂ ರಾಜ್ಯದ ವಿವಿಧ ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಮತ್ತು ವಿವಿಧ ಸಮುದಾಯದ ನಾಯಕರನ್ನು ಪುತ್ರಿಯ ವಿವಾಹಕ್ಕೆ ಆಹ್ವಾನಿಸುವ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ.
ಈ ಆಹ್ವಾನ ನೀಡುವ ನಿಮಿತ್ತವೇ ಎಂದು ಸಿಎಂ ನಿವಾಸಕ್ಕೆ ಅವರು ಭೇಟಿಕೊಟ್ಟಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹಿರಿಯ ಪುತ್ರಿ ಐಶ್ವರ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ, ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ದಾರ್ಥ ಹೆಗ್ಡೆ ಅವರ ಹಿರಿಯ ಪುತ್ರ ಅಮಾರ್ಥ್ಯ ಹೆಗ್ಡೆ ಅವರ ನಿಶ್ಚಿತಾರ್ಥ ನವೆಂಬರ್‌ನಲ್ಲಿ ಅದ್ದೂರಿಯಾಗಿ ನಡೆದಿತ್ತು.