ಬೆಂಗಳೂರು: ಜುಲೈ 2ರಂದು ಹಮ್ಮಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದ ಯೋಜನೆಯ ರೂಪುರೇಷೆ ಕುರಿತು ಸಮಗ್ರ ಚರ್ಚೆ ನಡೆಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಮುಖಂಡರ ಸಭೆಯ ಬಳಿಕ ಮಾತನಾಡಿದ ಅವರು, ಅಂದಿನ ಕಾರ್ಯಕ್ರಮಕ್ಕೆ ಪಕ್ಷದ ವತಿಯಿಂದ ಕೆಲವರಿಗೆ ಜವಾಬ್ದಾರಿ ನೀಡಿದ್ದೇವೆ. ಯಾವ ರೀತಿ ಕಾರ್ಯಕ್ರಮ ಮಾಡಬೇಕು, ಕೊರೊನಾ ಸಂದರ್ಭದಲ್ಲಿ ಅದನ್ನು ಹೇಗೆ ಆಯೋಜಿಸಬೇಕು ಎಂಬುದರ ಬಗ್ಗೆ ಇಂದು ಮುಖಂಡರ ಸಭೆ ನಡೆಸಿ ಚರ್ಚಿಸಿ ಸಂದೇಶ ಕೊಟ್ಟಿದ್ದೇವೆ ಎಂದು ತಿಳಿಸಿದ್ರು. ಸಮಾರಂಭದಲ್ಲಿ ಕೇವಲ 150 ಜನರಿಗೆ ಮಾತ್ರ ಅವಕಾಶ ಇರಲಿದೆ. ಇದರ ಬಗ್ಗೆ ಸಮಗ್ರವಾಗಿ ಚರ್ಚಿಸಿದ್ದೇನೆ ಎಂದರು.
ತಮ್ಮ ಬಗ್ಗೆ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರು ದೊಡ್ಡವರು. ಮಹಾತ್ಮರು ಏನು ಹೇಳಿದ್ದಾರೆ, ಅವರಿಗೆ ಏನು ಹೇಳಬೇಕು ಅದನ್ನು ಹೇಳಲಿ. ನಾನು ಅದರ ಬಗ್ಗೆ ಮಾತನಾಡಲ್ಲ ಎಂದರು.
ಬೆಂಗಳೂರು ಮಹಾನಗರದಲ್ಲಿ ಮರು ಲಾಕ್ಡೌನ್ ಜಾರಿಗೆ ತರುವ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡದ ಡಿಕೆಶಿ, ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಲಿ ಅದನ್ನು ನಾವು ಪ್ರಶ್ನಿಸುವುದಿಲ್ಲ. ಅವರ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳಲಿ ಎಂದರು.