ಬೆಂಗಳೂರು : ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕದ ಸದ್ಯದ ಪರಿಸ್ಥಿತಿಯನ್ನು ಸುಪ್ರಿಂ ಕೋರ್ಟ್‌ಗೆ ಮನವರಿಕೆ ಮಾಡಿದ್ದೇವೆ ಎಂದು ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಕಾಸಸೌಧದಲ್ಲಿ ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೀರು ಬಿಡಬೇಕಾಗಿದ್ದನ್ನು ಹಿಂದೆ ಬಿಟ್ಟಿದ್ದೇವೆ. ನಮ್ಮ ರೈತರನ್ನು ನಾವು ಕಾಪಾಡಬೇಕು. ತಮಿಳುನಾಡಿನವರು ಬೆಳೆಗಳನ್ನು ಕಂಟ್ರೋಲ್ ಮಾಡುತ್ತಿಲ್ಲ. 93 ಟಿಎಂಸಿ ನೀರನ್ನು ಈ ಬಾರಿ ತಮಿಳುನಾಡು ಬಳಸಿಕೊಂಡಿದೆ. ಸಂಕಷ್ಟ ಸಮಯದಲ್ಲಿ ಎಷ್ಟು ಕಡಿಮೆ ಬಳಸಿಕೊಳ್ಳಬೇಕಿತ್ತೋ ಅದಕ್ಕಿಂತ ಹೆಚ್ಚು ಬಳಸಿಕೊಂಡಿದ್ದಾರೆ. ಈ ಅಂಶವನ್ನು ನಾವು ಸುಪ್ರಿಂ ಕೋರ್ಟ್‌ಗೆ ಮನವರಿಕೆ ಮಾಡಿದ್ದೇವೆ. ವಾಸ್ತವಾಂಶ ಬಂದು ನೋಡಿ ಅಂತ ನಾವು ಮನವಿ ಮಾಡಿದ್ದೇವೆ ಎಂದರು.
ವಿಪಕ್ಷದವರು ಹೇಳಿದಂತೆ ನೀರು ನಿಲ್ಲಿಸಲು ಆಗುವುದಿಲ್ಲ. ಕಾನೂನು ತಜ್ಞರ ಜೊತೆಗೆ ನಾನು ಮಾತನಾಡಿದ್ದೇನೆ. ಮಳೆ ಇಲ್ಲ. ಬರೀ ಬೆಂಗಳೂರಿಗೆ ಮಳೆ ಬಂದಿದೆ. ಕಾವೇರಿ ಬೇಸಿನ್ಗೆ ಮಳೆ ಬಂದಿಲ್ಲ. ಎರಡೂ ಕಮಿಟಿಗಳ ಮುಂದೆ ನಮ್ಮ ವಾದ ಮಂಡಿಸಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆದಾಗ 24 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದು ಒತ್ತಾಯ ಮಾಡಿತ್ತು. 24 ಸಾವಿರ ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ ಅಂತ ವಾದ ಮಾಡಿದೆವು. 5 ಸಾವಿರ ಕ್ಯೂಸೆಕ್ ಬಿಡಬೇಕೆಂದು ಆದೇಶ ಮಾಡಿದರು. ನಾವು 3 ಸಾವಿರ ಕ್ಯೂಸೆಕ್ ನೀರು ಬಿಡುತ್ತೇವೆಂದು ಹೇಳಿದೆವು ಎಂದರು.
ಕಾವೇರಿ ವಿಚಾರದಲ್ಲಿ ಯಾಕೆ ನಾವು ರಾಜಕೀಯ ತರಬೇಕು. ಬಿಜೆಪಿ, ಜೆಡಿಎಸ್ನವರ ರಾಜಕೀಯ ನಿಲುವಿಗೆ ನಾನ್ಯಾಕೆ ಮಧ್ಯಪ್ರವೇಶ ಮಾಡಲಿ ಎಂದು ಪ್ರಶ್ನಿಸಿದರು. ಸಂಸದ ಪ್ರಜ್ವಲ್ ರೇವಣ್ಣ ಅನರ್ಹತೆ ವಿಚಾರಕ್ಕೆ ಪ್ರತಿಕ್ರಿಯಿದ ಡಿಕೆಶಿ, ಇದು ಎಲ್ಲರಿಗೂ ಕೂಡ ಎಚ್ಚರಿಕೆ ಗಂಟೆ ಎಂದು ಹೇಳಿದರು.
ಬಿ.ಎಲ್.ಸಂತೋಷ್ ರಾಷ್ಟ್ರೀಯ ನಾಯಕರು ಅಂತ ಭಾವಿಸಿದ್ದೇನೆ. ಸಿ.ಟಿ.ರವಿ ತರಹ, ಈಶ್ವರಪ್ಪ ತರಹ ಅವರು ಮಾತನಾಡಿದ್ರೆ ನಾನೇನೂ ಮಾಡಲು ಆಗುವುದಿಲ್ಲ. ಈಶ್ವರಪ್ಪ, ಸಿ.ಟಿ.ರವಿ ರೀತಿ ಬಿ.ಎಲ್.ಸಂತೋಷ್ ಮಾತನಾಡುವುದು ಬೇಡ. ಅವರ ಸ್ಟೇಟಸ್ ಹಾಳಾಗುವುದು ಬೇಡ. ಅವರ ತೂಕಕ್ಕೆ ತಕ್ಕಂತೆ ಮಾತಿರಲಿ ಎಂದು ತಿರುಗೇಟು ನೀಡಿದರು.
ನೀರು ಬಿಡುಗಡೆ ಆದೇಶ ನೋವಿನದು: ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ. ಇದು ಕರ್ನಾಟಕಕ್ಕೆ ದೊಡ್ಡ ನೋವಿನ ಸಂಗತಿ. ಯಾಕೆಂದರೆ, ರಾಜ್ಯದಲ್ಲೇ ನೀರಿಲ್ಲ ಹಾಗೂ ಮಳೆಯೂ ಇಲ್ಲ. ಆದ್ದರಿಂದ ಪ್ರಾಧಿಕಾರದ ಅಧಿಕಾರಿಗಳು ಕರ್ನಾಟಕಕ್ಕೆ ಬಂದು ವಸ್ತುಸ್ಥಿತಿ ಪರಿಶೀಲನೆ ನಡೆಸಲಿ. ಬರವಿರುವ ಕಾರಣ ಕರ್ನಾಟಕ ಹೇಗೆ ಬಳಲುತ್ತಿದೆ ಎಂಬುದರ ವಾಸ್ತವ ಅರಿತುಕೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ (31-8-2023) ದೆಹಲಿಯಲ್ಲಿ ಮಾತನಾಡಿದ್ದರು.
ಇದನ್ನೂ ಓದಿ: ಕಾವೇರಿ: ದೆಹಲಿಯಲ್ಲಿ ಕಾನೂನು ತಜ್ಞರೊಂದಿಗೆ ಸಭೆ; 'ನೀರು ಬಿಡುಗಡೆ ಆದೇಶ ಕರ್ನಾಟಕಕ್ಕೆ ನೋವಿನದು'- ಡಿಕೆಶಿ