ಬೆಳಗಾವಿ: ಯೋಗಿ ಆದಿತ್ಯನಾಥ್ ಸರ್ಕಾರ ದೇಶಕ್ಕೆ ರೋಗ ತಂದುಕೊಟ್ಟಿದೆ. ಸಂಸ್ಕಾರಯುತ ದೇಶಕ್ಕೆ ಕಪ್ಪು ಚುಕ್ಕೆ ತಂದುಕೊಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಗೌರವ, ಸ್ವಾಭಿಮಾನ, ನಮ್ಮ ಸಮುದಾಯಕ್ಕೆ ಜಗತ್ತಿನ ಮುಂದೆ ಯೋಗಿ ಸರ್ಕಾರ ಕಪ್ಪು ಚುಕ್ಕೆ ತಂದಿದೆ. ದಲಿತ ಯುವತಿ ಎಂಬುವುದು ಪ್ರಶ್ನೆ ಇಲ್ಲಿ ಉದ್ಭವಿಸಲ್ಲ. ಮಾನವಕುಲಕ್ಕೆ ದೊಡ್ಡ ಅವಮಾನವಾಗಿದೆ ಎಂದು ಹೇಳಿದರು.
ಅಂಗಡಿ ಅಂತ್ಯಸಂಸ್ಕಾರ ಹೇಗಾಯ್ತು ಗೊತ್ತಲ್ಲ!
ಸುರೇಶ್ ಅಂಗಡಿ ಅವರು ರೈಲ್ವೆ ಸಚಿವರಾಗಿದ್ದರು. ಬೆಳಗಾವಿಯಲ್ಲಿ ಆರ್ಮಿ ಬೇಸ್ ಇದೆ. ಪಾರ್ಥಿವ ಶರೀರವನ್ನು ಇಲ್ಲಿಗೆ ತರಬಹುದಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಯತ್ನವನ್ನೇ ಮಾಡಲಿಲ್ಲ ಎಂದು ಡಿಕೆಶಿ ಆರೋಪಿಸಿದರು.
ಪಾರ್ಥಿವ ಶರೀರ ಇಲ್ಲಿಗೆ ತಂದು ಗೌರವಯುತ ಅಂತ್ಯಸಂಸ್ಕಾರ ಮಾಡಬೇಕಿತ್ತು. ಕ್ಷೇತ್ರದ ಜನತೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಬೇಕಿತ್ತು. ಎರಡು ತಿಂಗಳ ಹಿಂದೆ ಏನೇನೋ ರಾಜಕಾರಣ ನಡೆದಿತ್ತು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಆಗಲಿಲ್ಲ ಎಂದು ಹೇಳಿದರು.
ಅಂತ್ಯ ಸಂಸ್ಕಾರ ಹೇಗಾಯಿತು ಎಂಬುವುದನ್ನು ಎಲ್ಲರೂ ವಿಡಿಯೋದಲ್ಲಿ ನೋಡಿದ್ದಾರೆ. ಕ್ಷೇತ್ರದ ಜನರು ಸುರೇಶ್ ಅಂಗಡಿಯವರ ಆತ್ಮ ಹಾಗೂ ಅವರ ಕುಟುಂಬ ಈ ಬಗ್ಗೆ ನಿರ್ಧಾರ ಮಾಡಬೇಕು ಎಂದು ಮಾರ್ಮಿಕವಾಗಿ ಹೇಳಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಇಂದು ಸಂಜೆ ಜಿಲ್ಲಾ ಕಾಂಗ್ರೆಸ್ ಕಮಿಟಿ ಜತೆ ಸಭೆ ನಡೆಸಲಿದ್ದೇನೆ. ಎಲ್ಲರ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಈ ಹಿಂದೆ ಸೋತವರು, ಗೆದ್ದವರ ಅಭಿಪ್ರಾಯವನ್ನು ಸಂಗ್ರಹಿಸುತ್ತೇನೆ ಎಂದರು.