ಬೆಂಗಳೂರು : ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷ ಬಲವರ್ಧನೆಗೆ ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ದಟ್ಟವಾಗ್ತಿದೆ.
ಹಳೆ ಮೈಸೂರು ಹಾಗೂ ಬಯಲುಸೀಮೆ ಜಿಲ್ಲೆಗಳ ಜೆಡಿಎಸ್ ಹಾಗೂ ಬಿಜೆಪಿಯ ನಾಯಕರನ್ನು ಗುರಿಯಾಗಿಸಿಕೊಂಡಿರುವ ಶಿವಕುಮಾರ್ ಪಕ್ಷಕ್ಕೆ ಸೆಳೆಯುವ ಯತ್ನ ಆರಂಭಿಸಿದ್ದಾರೆ. ಗೆಲ್ಲುವ ಸಾಮರ್ಥ್ಯವುಳ್ಳ ಹಾಗೂ ಜನಪ್ರಿಯ ಒಕ್ಕಲಿಗ ನಾಯಕರನ್ನೇ ಆಯ್ಕೆಯ ಮಾನದಂಡವಾಗಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ಎಲ್ಲಾ ಜಿಲ್ಲೆಗಳ ಪ್ರಮುಖ ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿ ಸಭೆ ನಡೆಸಿರುವ ಡಿಕೆಶಿ, ಸಮಾನ ಮನಸ್ಕ ಹಾಗೂ ಕಾಂಗ್ರೆಸ್ ನಾಯಕರ ಜತೆ ಹೊಂದಿಕೊಳ್ಳಬಲ್ಲ ಜೆಡಿಎಸ್, ಬಿಜೆಪಿ ನಾಯಕರಿಗೆ ಗಾಳ ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಈಗಾಗಲೇ ಪಕ್ಷದ ನಾಯಕರ ಸಭೆ ಕರೆದು ಬೆಂಗಳೂರಿನಲ್ಲಿ ಚರ್ಚಿಸಿರುವ ಅವರು, ನಾಯಕರ ಒಪ್ಪಿಗೆ ಪಡೆದುಕೊಂಡಿದ್ದಾರಂತೆ. ಇದರಿಂದ ಮುಂದಿನ ಒಂದೆರಡು ತಿಂಗಳಲ್ಲಿಯೇ ಹಲವು ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ.

ಒಕ್ಕಲಿಗರ ಮತ ಮರಳಿ ತರಲು ಹೊಸ ತಂತ್ರ
ವಿವಿಧ ಕಾರಣಕ್ಕೆ ಕಾಂಗ್ರೆಸ್ ತೊರೆದಿರುವ ನಾಯಕರಿಗೂ ಡಿಕೆಶಿ ಗಾಳ ಹಾಕಿದ್ದಾರೆ. ಅತ್ಯಂತ ಪ್ರಮುಖವಾಗಿ ಒಕ್ಕಲಿಗ ನಾಯಕರನ್ನೇ ಮತ್ತೆ ಪಕ್ಷಕ್ಕೆ ಸೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ತಮ್ಮ ನಾಯಕತ್ವವನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲೂ ಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಅಹಿಂದ ನಾಯಕರಾಗಿ ಸಿದ್ದರಾಮಯ್ಯ ಗುರುತಿಸಿಕೊಂಡಿದ್ದರೆ ಇತ್ತ ಹಿಂದುಳಿದ ವರ್ಗಗಳ ನಾಯಕರಾಗಿ ಡಾ. ಜಿ. ಪರಮೇಶ್ವರ್ ಗುರುತಿಸಿಕೊಂಡಿದ್ದಾರೆ. ದಲಿತ ನಾಯಕರಿಗೂ ಕೊರತೆ ಇಲ್ಲ. ಇದೀಗ ಒಕ್ಕಲಿಗ ನಾಯಕರನ್ನು ಪಕ್ಷಕ್ಕೆ ಸೆಳೆದು ಮತದಾರರ ಒಲವು ಗಳಿಸಿ ತಾವೊಬ್ಬ ಒಕ್ಕಲಿಗರ ಪ್ರಬಲ ನಾಯಕನಾಗಿ ರೂಪುಗೊಳ್ಳುವುದು ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಒಕ್ಕಲಿಗ ಮತದಾರರ ಕರೆತರುವುದು ಡಿಕೆಶಿ ಮುಂದಿನ ಗುರಿಯಾಗಿದೆ.

ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರಿಗೆ ಗಾಳ
ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಪ್ರಬಲ ಒಕ್ಕಲಿಗ ನಾಯಕ ಜಿ.ಟಿ ದೇವೇಗೌಡ ಕಾಂಗ್ರೆಸ್ ಸೇರುವುದು ಪಕ್ಕಾ ಆಗಿದೆ. ತಮ್ಮೊಂದಿಗೆ ಮಗನಿಗೂ ಟಿಕೆಟ್ ಕೇಳಿರುವ ಅವರು ಎರಡು ಸ್ಥಾನ ಗೆಲ್ಲಿಸಿಕೊಡುವಲ್ಲಿ ಅನುಮಾನವಿಲ್ಲ. ಸಿದ್ದರಾಮಯ್ಯ ಜತೆಗೂ ಮಾತನಾಡಿ ಸಮ್ಮತಿ ಪಡೆದಿದ್ದಾರೆ. ಇನ್ನೊಂದೆಡೆ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಆಗಲೇ ಜೆಡಿಎಸ್ ಬಿಡುವುದಾಗಿ ಘೋಷಿಸಿದ್ದು, ಕಾಂಗ್ರೆಸ್ ಸೇರುತ್ತೇನೆ ಎಂದಿದ್ದಾರೆ. ಹಲವು ಸುತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆ ಚರ್ಚಿಸಿದ್ದಾರೆ.
‘ಕೈ’ ಹಿಡಿತಾರಾ ಬಿಎಸ್ವೈ ಆಪ್ತ?
ಇತ್ತ ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದ ವಿವಿಧ ನಾಯಕರನ್ನು ಡಿಕೆಶಿ ಸಂಪರ್ಕಿಸುತ್ತಿದ್ದಾರೆ. ಬಿಜೆಪಿ ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿ ಎಸ್ ಯಡಿಯೂರಪ್ಪ ಆಪ್ತ ಮಾಜಿ ಶಾಸಕ ಸುರೇಶ್ ಗೌಡರನ್ನೂ ಕೈ ಪಾಳಯಕ್ಕೆ ಕರೆತರುವ ಯತ್ನ ನಡೆದಿದೆ ಎಂಬ ಮಾತಿದೆ.
ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡರಿಗೂ ಕಾಂಗ್ರೆಸ್ ಗಾಳ ಹಾಕಿದೆ. ಮುಂದಿನ ಅವಧಿಗೆ ಅವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಈಗಲೇ ವೇದಿಕೆ ಸಿದ್ಧಪಡಿಸಲು ಡಿ ಕೆ ಶಿವಕುಮಾರ್ ಮುಂದಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಡಿಕೆಶಿ ಆ ಕ್ಷೇತ್ರದ ಪ್ರಭಾವಿ ನಾಯಕನಿಗೆ ಗಾಳ ಹಾಕಲು ಮುಂದಾಗಿದ್ದಾರೆ.
ಇದನ್ನೂ ಓದಿ: ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಖಾಯಂ: ಹೈಕೋರ್ಟ್ ಮಹತ್ವದ ತೀರ್ಪು