ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೇವಲ ಒಕ್ಕಲಿಗ ಸಮುದಾಯದ ನಾಯಕ ಮಾತ್ರವಲ್ಲ. ಇಡೀ ರಾಜ್ಯದಲ್ಲಿ ಅವರು ತಮ್ಮ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿರುವ ಲೀಡರ್ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಹಳೆ ಮೈಸೂರು ಭಾಗದಲ್ಲಿ ಸಹಜವಾಗಿಯೇ ಒಕ್ಕಲಿಗ ಸಮುದಾಯದಲ್ಲಿ ಆತಂಕ ಮೂಡಿದೆ. ಇದು ಅವಶ್ಯಕತೆ ಇತ್ತಾ ಅನ್ನೋ ಮಾತುಗಳು ಕೇಳಿ ಬರ್ತಿವೆ ಎಂದರು.
ಡಿಕೆಶಿ ಮಾಡಿರೋದು ಕ್ರೈಂ ಅಲ್ಲ. ಹಣದ ವ್ಯವಹಾರದ ವಿಚಾರಕ್ಕೆ ಈ ರೀತಿ ಆಗಿರೋದು, ಅದಕ್ಕಾಗಿ ರಾಜಕೀಯ ದ್ವೇಷ ಸಾಧಿಸುತ್ತಿರುವುದು ಒಳ್ಳೆಯದಲ್ಲ ಎಂದರು. ಡಿ ಕೆ ಶಿವಕುಮಾರ್ ಅವರ ವಿರುದ್ಧ ತನಿಖೆ ಮಾಡಬೇಡಿ ಎಂದು ನಾವು ಹೇಳುತ್ತಿಲ್ಲ. ಆದ್ರೆ ಅಧಿಕಾರಿಗಳು ಮಾಡುತ್ತಿರುವ ತನಿಖೆ ರೀತಿ ಸರಿಯಾಗಿಲ್ಲ. ವಿಚಾರಣೆಗೆ ಹಾಜರಾಗುತ್ತಿದ್ದರು. ಅನಗತ್ಯವಾಗಿ ಬಂಧಿಸಿದ್ದು ಸರಿ ಕಾಣಿಸುತ್ತಿಲ್ಲ. ತನಿಖೆಯನ್ನೇ ಮಾಡಬೇಕೆಂದರೆ ಸಾಕಷ್ಟು ಮಂದಿ ಸಿಗುತ್ತಾರೆ. ಆದರೆ ಡಿಕೆಶಿ ಅವರನ್ನು ಯಾಕೆ ಗುರಿಯಾಗಿಸಿಕೊಂಡಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ ಎಂದು ಚೆಲುವರಾಯಸ್ವಾಮಿ ಹೇಳಿದರು.