ಬೆಂಗಳೂರು : ಶ್ವಾಸಕೋಶ ಸೋಂಕಿನಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಮೈಸೂರಿಗೆ ತೆರಳಲು ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗ ಮಧ್ಯೆ ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿದ ಶಿವಕುಮಾರ್ ಅವರು ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್ ಎಂ ಕೃಷ್ಣ ಅವರ ಆರೋಗ್ಯದ ಬಗ್ಗೆ ವೈದ್ಯರೊಂದಿಗೆ ಮಾತುಕತೆ ನಡೆಸಿದರು.
ಈ ಬಗ್ಗೆ ಎಸ್.ಎಂ ಕೃಷ್ಣ ಅವರು ಶ್ವಾಸಕೋಶದ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದು, ಅವರಿಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಅವರ ವಿಶ್ರಾಂತಿಗೆ ಧಕ್ಕೆಯಾಗದಂತೆ ಸದ್ಯ ಯಾರೂ ಅವರ ಭೇಟಿಗೆ ಬರಬಾರದು ಎಂದು ಶಿವಕುಮಾರ್ ಅವರು ಕೃಷ್ಣ ಅವರ ಪರವಾಗಿ ಮನವಿ ಮಾಡಿದರು.
ಇನ್ನು ಆ್ಯಂಬುಲೆನ್ಸ್ 108 ತುರ್ತು ಸೇವೆ ಸ್ಥಗಿತ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ರೋಗಿಗಳ ರಕ್ಷಣೆ ಮಾಡುತಿಲ್ಲ. ರೈತರ ರಕ್ಷಣೆ ಮಾಡುತ್ತಿಲ್ಲ. ಕಾರ್ಮಿಕರ ರಕ್ಷಣೆ ಕೂಡ ಮಾಡುತ್ತಿಲ್ಲ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಸರ್ಕಾರ ವಿಫಲವಾಗಿದೆ. ನಾವು ಸರ್ಕಾರವನ್ನು ತಳ್ಳುತ್ತಿದ್ಧೇವೆ ಎಂದು ಕಾನೂನು ಸಚಿವರೇ ಹೇಳಿದ್ದಾರೆ. ಸಚಿವರೇ ಹೀಗೆ ಹೇಳಿದ ಮೇಲೆ ಆ್ಯಂಬುಲೆನ್ಸ್ ಕಥೆ ಬಿಡಿ ಎಂದು ಹೇಳಿದರು.
ಕಾಂಗ್ರೆಸ್ ಲಿಂಗಾಯತ ಮುಖ್ಯಮಂತ್ರಿಯನ್ನು ಗುರಿಯಾಗಿಸುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರು ಲಿಂಗಾಯತ ಜಾತಿ ಮೇಲೆ ಮುಖ್ಯಮಂತ್ರಿ ಆಗಿದ್ದಾರಾ..? ಸಂವಿಧಾನದ ಪ್ರಕಾರ ಅವರು ಮುಖ್ಯಮಂತ್ರಿ ಆಗಿದ್ದಾರೆ. ನಾವು ಸರ್ಕಾರವನ್ನು ಗುರಿ ಮಾಡುತ್ತಾ ಇದ್ದೇವೆ. ಸಿಎಂ ಸರ್ಕಾರದ ಮುಖ್ಯಸ್ಥನಿದ್ದಂತೆ, ಹಾಗಾಗಿ ಅವರನ್ನುಗುರಿಯಾಗಿಸಿಕೊಂಡಿದ್ಧೇವೆ ಎಂದು ಡಿಕೆಶಿ ಸಮಜಾಯಿಷಿ ನೀಡಿದರು.
ಇದನ್ನೂ ಓದಿ :ಎಸ್ ಎಂ ಕೃಷ್ಣ ಆರೋಗ್ಯ ವಿಚಾರಿಸಿದ ಬಿ ಎಸ್ ಯಡಿಯೂರಪ್ಪ