ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆ ಗೆಲುವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಡಿಕೆ ಸೋದರರು, ಪ್ರಚಾರ ಹಾಗೂ ಕಾರ್ಯತಂತ್ರ ರೂಪಿಸುವ ಕಾರ್ಯದಲ್ಲಿ ಅವಿರತವಾಗಿ ನಿರತರಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ಪರ ಬೆಳಗ್ಗಿನಿಂದ ಸಂಜೆಯವರೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಚಾರ ನಡೆಸಿದರು. ಪ್ರತಿದಿನ ಸಂಜೆ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಗೆಲುವಿನ ಕಾರ್ಯತಂತ್ರ ಹೆಣೆಯುತ್ತಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ 17 ಶಾಸಕರು ಒಬ್ಬರಾಗಿರುವ ಮುನಿರತ್ನ ನಾಯ್ಡು ಸೋಲು ಕಾಂಗ್ರೆಸ್ ನಾಯಕರಿಗೆ ಅನಿವಾರ್ಯವಾಗಿದೆ. ಇದಕ್ಕೆ ಅಗತ್ಯವಿರುವ ಎಲ್ಲ ಪ್ರಯತ್ನವನ್ನು ಅವರು ಮಾಡಿಕೊಂಡು ಸಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದಲೇ ಪಾಲಿಕೆ ಸದಸ್ಯರಾಗಿ ಹಾಗೂ ಎರಡನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಮುನಿರತ್ನ ರಾಜೀನಾಮೆ ನೀಡಿ ಬಿಜೆಪಿ ಸೇರಿ ಅಭ್ಯರ್ಥಿಯಾಗಿದ್ದಾರೆ. ಇವರನ್ನು ಸೋಲಿಸುವ ಪಣತೊಟ್ಟಿರುವ ಡಿಕೆ ಸೋದರರು ಈ ನಿಟ್ಟಿನಲ್ಲಿ ಅವಿರತ ಶ್ರಮಪಡುತ್ತಿದ್ದಾರೆ.
ಡಿಕೆ ಸುರೇಶ್ ಪಾಲಿಗೆ ಇದು ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ. ಇನ್ನು ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಉಪಚುನಾವಣೆ ಇದಾಗಿದೆ. ಇಲ್ಲಿ ಗೆಲ್ಲುವ ಮೂಲಕ ತಮ್ಮ ಅಧ್ಯಕ್ಷಗಿರಿಯ ಉತ್ತಮ ಆರಂಭ ಪಡೆಯುವುದು ಉದ್ದೇಶವಾಗಿದೆ. ಅಲ್ಲದೇ ಒಕ್ಕಲಿಗ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಅದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜೊತೆಗೆ ತಮ್ಮ ವೈಯಕ್ತಿಕ ವರ್ಚಸ್ಸನ್ನು ಪಣಕ್ಕಿಟ್ಟು ಡಿಕೆ ಸೋದರರು ಅಭ್ಯರ್ಥಿ ಕುಸುಮ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.
ಡಿಕೆಶಿ ರೋಡ್ ಶೋ
ಡಿ.ಕೆ. ಶಿವಕುಮಾರ್ ಅವರು ರಾಜರಾಜೇಶ್ವರಿ ನಗರ ವ್ಯಾಪ್ತಿಯ ಗೊರಗುಂಟೆಪಾಳ್ಯ, ಲಕ್ಷ್ಮಿದೇವಿನಗರದಲ್ಲಿ ಶನಿವಾರ ಸಂಜೆ ರೋಡ್ ಶೋ ನಡೆಸಿದರು. ಮಾಜಿ ಸಂಸದ ಧೃವನಾರಾಯಣ್, ಅಭ್ಯರ್ಥಿ ಕುಸುಮಾ ಎಚ್, ಶಾಸಕರಾದ ವೆಂಕಟರಮಣಪ್ಪ, ನಂಜೇಗೌಡ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಕಾರ್ಪೊರೇಟರ್ ಶಿವರಾಜ್, ನವೀನ್ ಮತ್ತಿತರ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ವಿಶೇಷ ಕಾರ್ಯತಂತ್ರಇನ್ನೊಂದೆಡೆ ಸಂಜೆ ಮತ್ತಿಕೆರೆಯ ಕಾಂಗ್ರೆಸ್ ಮುಖಂಡರೊಬ್ಬರ ನಿವಾಸಕ್ಕೆ ಭೇಟಿ ಕೊಟ್ಟು, ಸಂಸದ ಡಿಕೆ ಸುರೇಶ್ ಅಭ್ಯರ್ಥಿಯ ಗೆಲುವಿಗೆ ಅಗತ್ಯವಿರುವ ಕಾರ್ಯತಂತ್ರ ರೂಪಿಸುವ ಕಾರ್ಯ ಮಾಡಿದ್ದಾರೆ.
ಪ್ರತಿದಿನ ಒಬ್ಬ ಮುಖಂಡರ ಮನೆಗೆ ಭೇಟಿ ಕೊಟ್ಟು ಅವರನ್ನು ವಿಶ್ವಾಸಕ್ಕೆ ಪಡೆದು ಅವರ ಬೆಂಬಲಿಗರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮತ ಬೀಳುವಂತೆ ಮಾಡುವ ಹಾಗೂ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅಗತ್ಯವಿರುವ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ನಿನ್ನೆ ಕೂಡ ಮತ್ತಿಕೆರೆಯ ಮುಖಂಡರೊಬ್ಬರ ನಿವಾಸಕ್ಕೆ ಭೇಟಿ ಕೊಟ್ಟ ಸಂದರ್ಭ ಯುವ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಹೂವಿನ ಹಾರ ಹಾಕಿ ಇವರನ್ನು ಬರಮಾಡಿಕೊಂಡರು. ಒಂದು ಗಂಟೆಗೂ ಹೆಚ್ಚು ಕಾಲ ಡಿಕೆ ಸುರೇಶ್ ಈ ನಿವಾಸದಲ್ಲಿದ್ದು ಸಮಾಲೋಚನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಡಿಕೆಶಿ, ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ಕೊಡುತ್ತಿದ್ದಾರೆ. ವಿದ್ಯುತ್ ಸಂಪರ್ಕ ಕಡಿಗೊಳಿಸುವುದಾಗಿ ಹೇಳುತ್ತಿದ್ದಾರೆ. ಯಾವ ಸಂಪರ್ಕ ಕಿತ್ತು ಹಾಕುತ್ತಾರೆ. ವಿದ್ಯುತ್ ಕಿತ್ತು ಹಾಕುವುದಕ್ಕೆ ಬಂದರೆ ಯಾವ ರೀತಿ ಶಾಕ್ ಹೊಡೆಯುತ್ತೆ ಅಂಥ ತೋರಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು.