ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚವ ಡಿಕೆ ಶಿವಕುಮಾರ್ ಇಂದು ದೆಹಲಿಗೆ ತೆರಳಿದ್ದು, ಅಲ್ಲಿ ವಿವಿಧ ರಾಷ್ಟ್ರೀಯ ಕಾಂಗ್ರೆಸ್ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇಂದು ಬೆಳಿಗ್ಗೆ ದೆಹಲಿಗೆ ತೆರಳಿರುವ ಡಿಕೆಶಿ ರಾತ್ರಿ ಅಲ್ಲೇ ತಂಗಿದ್ದು, ನಾಳೆ ಇನ್ನಷ್ಟು ನಾಯಕರನ್ನು ಭೇಟಿ ಮಾಡಿ ವಾಪಸ್ ಆಗುವ ಸಾಧ್ಯತೆ ಇದೆ. ರಾಜ್ಯ ಕಾಂಗ್ರೆಸ್ ನಾಯಕರ ಒತ್ತಡದಿಂದಾಗಿ ತಮಗೆ ಸಿಗಬೇಕಿದ್ದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಘೋಷಣೆ ವಿಳಂಬವಾಗುತ್ತಿದ್ದು, ಇದಕ್ಕೊಂದು ಪರಿಹಾರ ಮಾರ್ಗ ಹುಡುಕಿಕೊಂಡು ಬರುವ ಉದ್ದೇಶದಿಂದ ಡಿಕೆಶಿ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಅವಕಾಶ ಸಿಕ್ಕರೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಇನ್ನೊಂದು ಸುತ್ತಿನ ಸಮಾಲೋಚನೆ ನಡೆಸಿ ಹಿಂದಿರುಗಲಿದ್ದಾರೆ. ಇದಲ್ಲದೆ ಹೈಕಮಾಂಡ್ ಮಟ್ಟದಲ್ಲಿ ತಮಗೆ ಸಹಕಾರ ನೀಡಬಲ್ಲ ನಾಯಕರಾದ ಅಹ್ಮದ್ ಪಟೇಲ್, ಗುಲಾಮ್ ನಬಿ ಆಜಾದ್ ಅವರಲ್ಲದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಹಾಗೂ ಇತರೆ ಹಿರಿಯ ನಾಯಕರನ್ನು ಭೇಟಿ ಮಾಡಿ, ತಮ್ಮ ಅಭಿಲಾಷೆಯನ್ನು ತಿಳಿಸಿ ಬರಲಿದ್ದಾರೆ. ಹೇಗಾದರೂ ಈ ಬಾರಿ ದೆಹಲಿ ಭೇಟಿ ಫಲಪ್ರದವಾಗಿಸಲು ಶಿವಕುಮಾರ್ ವಿಶೇಷ ಗಮನ ಹರಿಸಿದ್ದು, ಒಂದೊಮ್ಮೆ ಅವಕಾಶ ಸಿಕ್ಕರೆ ರಾಷ್ಟ್ರೀಯ ನಾಯಕರ ಮನವೊಲಿಸಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆದೇಶ ಪತ್ರದೊಂದಿಗೆ ಹಿಂದಿರುಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.