ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಮೊಮ್ಮಗ ಅಮಾರ್ತ್ಯ ಹೆಗ್ಡೆ ತಾಂಬೂಲ ಶಾಸ್ತ್ರ ಇಂದು ನಡೆಯಿತು.
ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರದ ನಿವಾಸದಲ್ಲಿ ಇಂದು ಸರಳ ರೀತಿಯಲ್ಲಿ ಬೆರಳೆಣಿಕೆಯಷ್ಟು ಸಂಬಂಧಿಕರ ಸಮ್ಮುಖದಲ್ಲಿ ಸಮಾರಂಭ ನೆರವೇರಿದೆ. ಎರಡೂ ಕುಟುಂಬದ ಮುಖ್ಯಸ್ಥರು ತಾಂಬೂಲ ಬದಲಾಯಿಸಿಕೊಳ್ಳುವ ಮೂಲಕ ವಿವಾಹ ನಿಶ್ಚಯ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ಐಶ್ವರ್ಯ ಹಾಗೂ ಅಮಾರ್ತ್ಯ ಹೆಗ್ಡೆ ಪರಸ್ಪರ ಹಾರ ಕೂಡ ಬದಲಾಯಿಸಿಕೊಂಡರು.
ಕಳೆದ ಒಂದು ವರ್ಷದಿಂದ ಕೇಳಿಬರುತ್ತಿದ್ದ ಮದುವೆಯ ಸಂಬಂಧದ ಮಾತುಗಳು ಈ ಮೂಲಕ ಅಧಿಕೃತವಾಗಿದ್ದು, ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಮದುವೆ ನಿಶ್ಚಿತಾರ್ಥ ನಡೆಸಲು ಎರಡೂ ಕುಟುಂಬದ ಹಿರಿಯರು ತೀರ್ಮಾನಿಸಿದ್ದಾರೆ.
ನಿಶ್ಚಿತಾರ್ಥದ ದಿನಾಂಕ ಹಾಗೂ ವಿವಾಹ ದಿನಾಂಕ ಮತ್ತು ಸ್ಥಳವನ್ನು ಇಂದು ಸಂಜೆ ಎಸ್.ಎಂ.ಕೃಷ್ಣ ಅವರ ನಿವಾಸ ಇಲ್ಲವೇ ಅವರ ಸೋದರಿಯ ನಿವಾಸದಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ ಅಂತಿಮಗೊಳಿಸಲಿದ್ದಾರೆ.
ಡಿಕೆಶಿ ಕುಟುಂಬ ಸದಸ್ಯರು ಹಾಗೂ ಬೆರಳೆಣಿಕೆಯಷ್ಟು ಸಂಬಂಧಿಕರು ಮತ್ತು ಎಸ್.ಎಂ.ಕೃಷ್ಣ ದಂಪತಿ ಹಾಗೂ ಅವರ ಸಂಬಂಧಿಕರು ಈ ಸಮಾರಂಭಕ್ಕೆ ಸಾಕ್ಷಿಯಾದರು. ಮಧ್ಯಾಹ್ನದ ಭೋಜನ ಸಮಯಕ್ಕೆ ಸೇರಿದ್ದ ಕುಟುಂಬ ಎರಡು ಗಂಟೆಗಳ ಕಾಲ ಶಿವಕುಮಾರ್ ನಿವಾಸದಲ್ಲಿದ್ದು ಅಲ್ಲಿಯೇ ಸಮಾರಂಭ ಮುಗಿಸಿ, ಭೋಜನದ ಬಳಿಕ ತೆರಳಿದೆ.
ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಸಮಾರಂಭ ನೆರವೇರಿದರೆ, ಭೋಜನ ವ್ಯವಸ್ಥೆಯನ್ನು ಇವರ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್ ನಿವಾಸದಲ್ಲಿ ಆಯೋಜಿಸಲಾಗಿತ್ತು. ಇಡೀ ಸಮಾರಂಭವನ್ನು ಅತ್ಯಂತ ಗುಪ್ತವಾಗಿ ಇರಿಸಿದ್ದರು.