ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಉಪಚುನಾವಣೆ ಪ್ರಚಾರ ಭಾಗವಾಗಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜರಾಜೇಶ್ವರಿ ನಗರದ ವಿವಿಧೆಡೆ ಸಂಚರಿಸಿ ಪ್ರಚಾರ ನಡೆಸಿದರು.
ಬಿಇಎಂಎಲ್ ಲೇಔಟ್ ನಲ್ಲಿರುವ ಪ್ರೊ. ಸಿದ್ದರಾಜು ನಿವಾಸಕ್ಕೆ ಡಿಕೆಶಿ ಭೇಟಿ ಕೊಟ್ಟು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಬಿಬಿಎಂಪಿ ಸದಸ್ಯ ಜಿ.ಹೆಚ್ ರಾಮಚಂದ್ರ ನಿವಾಸದ ಹಿಂಭಾಗದಲ್ಲೇ ವಾಸವಾಗಿರುವ ಸಿದ್ದರಾಜು ಅವರ ನಿವಾಸಕ್ಕೆ ಆಗಮಿಸಿದ ಡಿಕೆಶಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಸಿದ್ದರಾಜು ನಿವಾಸದಲ್ಲಿ ಕೆಲಕಾಲ ಸಮಾಲೋಚನೆ ನಡೆಸಿ ಅಲ್ಲಿಂದ ತೆರಳಿದ್ದಾರೆ.
ಇಂದು ಪಕ್ಷಕ್ಕೆ ಸೇರ್ಪಡೆಯಾದ ಸಿದ್ದರಾಜು ಹಾಗೂ ಇತರೆ ಬೆಂಬಲಿಗರು ಇದೇ ಸಂದರ್ಭ ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮುನಿರತ್ನ ಭಾವಚಿತ್ರವಿರುವ ಸ್ಟಿಕರ್ ಅನ್ನು ಮನೆಗಳಿಗೆ ಅಂಟಿಸಲಾಗಿದೆ. ಈ ರೀತಿ ಸ್ಟಿಕ್ಕರ್ ಅಂಟಿಸುವುದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗಲಿದೆ. ಈ ರೀತಿ ಸ್ಟಿಕ್ಕರ್ ಅಂಟಿಸಿದ್ದ ಮನೆಗಳಿಗೆಲ್ಲ ಹಣ ನೀಡುವುದು ಎಂಬ ಮಾಹಿತಿ ಇದೆ. ಗುರುತು ಪತ್ತೆಗಾಗಿ ಈ ರೀತಿ ಸ್ಟಿಕರ್ ಅನ್ನು ಹಣ ಹಂಚುವುದಕ್ಕೆ ಮುಂಚಿತವಾಗಿಯೇ ಅಂಟಿಸಲಾಗುತ್ತದೆ. ಇದು ಚುನಾವಣಾ ಆಯೋಗದ ಪ್ರಕಾರ ಅಪರಾಧವಾಗುತ್ತದೆ. ಈ ಬಗ್ಗೆ ಬಲವಾದ ಆಧಾರ ಲಭಿಸಿದ್ದು, ಇಂದೇ ಚುನಾವಣಾ ಆಯೋಗಕ್ಕೆ ಈ ಸಂಬಂಧ ದೂರು ಸಲ್ಲಿಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರ ವಾರ್ಡ್ ನಂಬರ್ 69, 161 ರಲ್ಲಿ ಈ ರೀತಿ ಕಾರ್ಯ ನಡೆಯುತ್ತಿದೆ. ಇದನ್ನು ಖಂಡಿಸಿ ನಾವು ಚುನಾವಣಾ ಆಯೋಗವನ್ನು ಭೇಟಿ ಮಾಡಿ ದೂರು ಸಲ್ಲಿಸಲಿದ್ದೇವೆ ಎಂದು ಸಿದ್ದರಾಜು ವಿವರಿಸಿದರು.