ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆದಿಚುಂಚನಗಿರಿ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರನ್ನು ವಿಜಯನಗರ ಮಠದಲ್ಲಿ ಬುಧವಾರ ರಾತ್ರಿ ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಹಾಜರಿದ್ದರು. ವಿಜಯನಗರದ ಶಾಖಾ ಮಠದಲ್ಲಿ ಶ್ರೀಗಳ ಜೊತೆ ಶಿವಕುಮಾರ್ ಸುದೀರ್ಘ ಮಾತುಕತೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷರಾಗಿ ನಿಯೋಜಿತರಾದ ದಿನ ತುರ್ತಾಗಿ ಶ್ರೀಗಳನ್ನು ಭೇಟಿಯಾಗಿ ಬಂದಿದ್ದ ಶಿವಕುಮಾರ್ ಸಮಾಲೋಚಿಸುವ ಕಾರ್ಯ ಮಾಡಿರಲಿಲ್ಲ ಈ ಹಿನ್ನೆಲೆ ನಿನ್ನೆ ರಾತ್ರಿ ಭೇಟಿಕೊಟ್ಟು ಚರ್ಚಿಸಿ ಹಿಂದಿರುಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ನಿಯೋಜಿತರಾಗುತ್ತಿದ್ದರು ಹಲವು ರಾಜಕೀಯ ನಾಯಕರ ಹಾಗೂ ಧಾರ್ಮಿಕ ಮುಖಂಡರ ವಿಶ್ವಾಸಗಳಿಸುವ ನಿಟ್ಟಿನಲ್ಲಿ ವಿವಿಧ ನಾಯಕರು ಹಾಗೂ ಮಠಮಾನ್ಯಗಳ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿ ಬರುತ್ತಿದ್ದು, ಇದನ್ನೇ ನಿನ್ನೆಯೂ ಮುಂದುವರಿಸಿದ್ದಾರೆ.
ಇಂದು ಸುದ್ದಿಗೋಷ್ಠಿ
ಕೆಲ ಮಹತ್ವದ ವಿಚಾರಗಳನ್ನು ವಿವರಿಸುವ ಉದ್ದೇಶದಿಂದ ಶಿವಕುಮಾರ್ ಇಂದು ಮಧ್ಯಾಹ್ನ ತಮ್ಮ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ. ಕೊರೊನಾ ಭೀತಿ ರಾಜ್ಯದಲ್ಲಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ತಿಳಿಸುವ ಜತೆಗೆ ಹಾಗೂ ರಾಜ್ಯ ಸರ್ಕಾರ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆಯ ಕುರಿತು ಸಲಹೆ ನೀಡುವ ಕಾರ್ಯ ಮಾಡಲಿದ್ದಾರೆ ಎಂಬ ಮಾಹಿತಿ ಇದೆ.