ಬೆಂಗಳೂರು: ಡಿ.ಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಉಗ್ರರ ಲಿಂಕ್ ಇರುವ ಕಾರಣ ಸಿಸಿಬಿ ಪೊಲೀಸರು ಎಲ್ಲ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಇದೀಗ ತಡರಾತ್ರಿ ಜೈದ್ ಎಂಬಾತನನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಜೈದ್, ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಕಾರಣ ಬಂಧಿಸಲಾಗಿದೆ. ಮತ್ತೊಂದೆಡೆ ಆರೋಪಿಯ ಬಾವ ಅಫ್ರೀದಿ ಎಂಬಾತ ಬೆಂಗಳೂರಿನಲ್ಲಿ ನಡೆದಿದ್ದ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ. ಅಫ್ರೀದಿ ಸಂಬಂಧಿ ಈತನಾಗಿದ್ದು, ಸದ್ಯಕ್ಕೆ ಟೆರರ್ ಲಿಂಕ್ ಇರುವ ಆಧಾರದ ಮೇರೆಗೆ ತನಿಖೆಯನ್ನು ಸಿಸಿಬಿ ಚುರುಕುಗೊಳಿಸಿದೆ. ಈ ಘಟನೆ ಹಿಂದೆ ಯಾರಿದ್ದಾರೆ?, ಈತನ ಮೊಬೈಲ್ ಗೆ ಯಾರೆಲ್ಲಾ ಕರೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಸಿಸಿಬಿ ತನಿಖೆ ನಡೆಸುತ್ತಿದೆ.
ಇನ್ನೊಂದೆಡೆ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಸಾಲು ಸಾಲು ಆರೋಪಿಗಳನ್ನು ಬಂಧಿಸಿದರೂ ಕೂಡ ಆರೋಪಿಗಳ ಪಟ್ಟಿ ಮಾತ್ರ ಮುಗಿಯುತ್ತಿಲ್ಲ. ಮತ್ತೊಬ್ಬ ಪ್ರಮುಖ ಆರೋಪಿ ಸಿರಾಜ್ ತಲೆಮರೆಸಿಕೊಂಡ್ಡಿದ್ದು, ಈತ ಠಾಣೆ ಮುಂದೆ ಗಲಭೆಗೆ ಪ್ರಚೋದನೆ ನೀಡಿದ್ದ.
ಇನ್ನು ಡಿ.ಜೆ ಹಳ್ಳಿ ಠಾಣೆಗೆ ಪೂರ್ವ ವಿಭಾಗ ಡಿಸಿಪಿ ಶರಪ್ಪ ಭೇಟಿ ನೀಡಿ ಪ್ರಮುಖ ಆರೋಪಿಗಳ ಹಿನ್ನೆಲೆಯನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ.