ಬೆಂಗಳೂರು : ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಗಲಭೆಗೆ ಕಾರಣವೆಂದು ಆರೋಪಿಸಲಾಗುತ್ತಿರುವ ಎಸ್ಡಿಪಿಐ ಸಂಘಟನೆಯನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಧಿಸಬೇಕು ಎನ್ನುವುದು ಸೇರಿ 6 ಬೇಡಿಕೆಯುಳ್ಳ ಸತ್ಯಸೋಧನಾ ವರದಿಯನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ನೇತೃತ್ವದ ಸಮಿತಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಸಲ್ಲಿಸಿದೆ.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಸತ್ಯಶೋಧನಾ ವರದಿಯನ್ನು ಹಸ್ತಾಂತರ ಮಾಡಲಾಯಿತು. ನಂತರ ಮಾತನಾಡಿದ ಲಿಂಬಾವಳಿ ಅವರು, ಇದು ಆಕಸ್ಮಿಕ ಘಟನೆ ಅಲ್ಲ. ವ್ಯವಸ್ಥಿತ ಯೋಜನೆಯಿಂದಾದ ಕೃತ್ಯ. ಪರಿಶಿಷ್ಟ ಜಾತಿ ಸಮುದಾಯದ ಶಾಸಕನ ಮನೆಗೆ ಬೆಂಕಿ ಹಚ್ಚಿದರೂ ಅದೇ ಪಕ್ಷದ ಮುಖಂಡರು ರಕ್ಷಣೆಗೆ ಬಾರದಿರುವುದು ಮತ್ತು ಕಾಂಗ್ರೆಸ್ ದೇಶ ವಿರೋಧಿ ಶಕ್ತಿಗಳಿಗೆ ಬಹಿರಂಗ ಬೆಂಬಲ ಕೊಟ್ಟಿರುವುದರ ಜತೆಗೆ ಎಸ್ಡಿಪಿಐ ಷಡ್ಯಂತ್ರದಿಂದ ಘಟನೆ ತೀವ್ರ ಸ್ವರೂಪ ಪಡೆಯಿತು. ಇದರಲ್ಲಿ ನಿಖರವಾಗಿ ಕಾಂಗ್ರೆಸ್ನ ಕೈವಾಡವಿದೆ. ಸ್ಥಳೀಯ ಕಾಂಗ್ರೆಸ್ ಸದಸ್ಯರು ಕುಮ್ಮಕ್ಕು ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ನವೀನ್ ಪೋಸ್ಟ್ ಮುಖಾಂತರ ಈ ಘಟನೆ ಪ್ರಾರಂಭವಾಯಿತು ಎನ್ನಲಾಗುತ್ತದೆ. ಆದರೆ, ನವೀನ್, ಬಶೀರ್ ಪೋಸ್ಟ್ಗೆ ರಿಯಾಕ್ಟ್ ಮಾಡಿದಾಗ ಘಟನೆ ಆರಂಭವಾಯಿತು. ಆದರೆ, ಬಶೀರ್ ಯಾಕೆ ಬಂಧನವಾಗಿಲ್ಲ ಎನ್ನುವುದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.
ಪೊಲೀಸ್ ಠಾಣೆಯೊಳಗೆ ಹಿರಿಯ ಅಧಿಕಾರಿಗಳು ಬಾರದಂತೆ ನೋಡಿಕೊಳ್ಳಲಾಯಿತು. ಅಂದು ಸಂಜೆ 5.30 ರಿಂದ ರಾತ್ರಿ 11ರವರೆಗೆ ತಾಲಿಬಾನ್ ಆಡಳಿತ ರೀತಿಯ ಪರಿಸ್ಥಿತಿ ನಿರ್ಮಾಣ ಮಾಡಲಾಗಿತ್ತು. ಎಸ್ಡಿಪಿಐ, ಕಾಂಗ್ರೆಸ್ ವ್ಯವಸ್ಥಿತ ಕೆಲಸ ಮಾಡಿದೆ ಎಂದು ಆರೋಪಿಸಿದರು. ಎಸ್ಡಿಪಿಐ ಕಚೇರಿಯಲ್ಲಿ ಆಯುಧ ಸಿಕ್ಕಿವೆ, ಕಾಂಗ್ರೆಸ್ ನಾಯಕರ ಬಂಧನವಾಗಿದೆ.
ಇದು ಆಕಸ್ಮಿಕ ಪ್ರಕರಣ ಅಲ್ಲ, ಆ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಸತ್ಯಶೋಧನಾ ಸಮಿತಿ 6 ಅಂಶಗಳನ್ನು ಸರ್ಕಾರಕ್ಕೆ ತಿಳಿಸಿದೆ. ಘಟನೆಗೆ ಕಾರಣರಾದ ಎಸ್ಡಿಪಿಐ ಸಂಘಟನೆ 10-12 ಸಾವಿರ ಜನ ಸೇರುವಂತೆ ಸಾಮಾಜಿಕ ಜಾಲತಾಣ ಬಳಸಿಕೊಂಡಿತು. ಎಸ್ಡಿಪಿಐ ದೇಶದ್ರೋಹ ಮಾಡಲು ಮುಸ್ಲಿಂ ಬಾಹುಳ್ಯ ಪ್ರದೇಶ ನಿಯಂತ್ರಕ್ಕೆ ತೆಗೆದುಕೊಂಡು ಗಲಾಟೆ ನಡೆಸುವ ಷಡ್ಯಂತ್ರ ನಡೆಸಿದೆ. ಹಾಗಾಗಿ, 6 ಅಂಶಗಳ ವರದಿ ನೀಡಲಾಗಿದೆ ಎಂದರು.
ವರದಿಯಲ್ಲಿನ ಅಂಶಗಳು..
1. ಗಾಂಜಾ ಸೇವಿಸುವ ಯುವಕರು ಈ ಗಲಭೆಯಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ, ಎಸ್ಡಿಪಿಐ ಸಂಪೂರ್ಣ ನಿಷೇಧ ಮಾಡಬೇಕು.
2. ಯಾರೂ ಅಮಾಯಕರಿಲ್ಲ, ಗಲಾಟೆ, ದೊಂಬಿಯಲ್ಲಿ ಭಾಗಿಯಾದ ಎಲ್ಲರ ಮೇಲೆ ಕ್ರಮ ಕೈಗೊಳ್ಳಬೇಕು
3. ಕ್ಲೇಮ್ ಕಮೀಷನರ್ ನೇಮಕ ಆಗಿದೆ. ಆದರೆ, ದ್ವಂಸವಾದ ಅಂಗಡಿ ಮನೆ ಹಿಂದೂಗಳಿಗೆ ಸೇರಿವೆ. ಹಾಗಾಗಿ, ತಕ್ಷಣ ಸರ್ಕಾರ ಪರಿಹಾರ ನೀಡಬೇಕು, ದೊಂಬಿ ನಡೆಸಿದವರಿಂದ ಅದನ್ನು ವಸೂಲಿ ಮಾಡಬೇಕು
4. ಸರ್ಕಾರ ಬೇಹುಗಾರಿಕೆ ತೀವ್ರಗೊಳಿಸಿ ಶಂಕಿತರೆಲ್ಲರ ಮೇಲೆ ನಿಗಾ ಇರಿಸಬೇಕು, ಅವರನ್ನು ಬಂಧಿಸಬೇಕು.
5. ಎನ್ಐಎ ಈಗಾಗಲೇ ಎರಡು ಪ್ರಕರಣ ಕೈಗೆತ್ತಿಕೊಂಡಿದೆ. ಇದರ ಜೊತೆ ಈ ಪ್ರಕರಣ ಕೂಡ ಸೇರಿಸಬೇಕು.
6. ಡಿಜೆ ಹಳ್ಳಿ, ಕೆಜಿ ಹಳ್ಳಿ ರೀತಿಯ ಪ್ರದೇಶಗಳು ಎಲ್ಲಿವೆಯೋ ಅಲ್ಲಿ ದಕ್ಷ ಅಧಿಕಾರಿಗಳನ್ನು ನೇಮಿಸಬೇಕು.
ವರದಿ ಸ್ವೀಕರಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸತ್ಯಶೋಧನಾ ವರದಿ ಹಸ್ತಾಂತರ ಮಾಡಿದ್ದಾರೆ. ಈ ವರದಿಯನ್ನು ನಾಳೆ ಸಿಎಂಗೆ ಸಲ್ಲಿಕೆ ಮಾಡುತ್ತೇವೆ. ಘಟನೆ ಹಿನ್ನೆಲೆ ನೋಡಿದ್ರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಯಾವ ರೀತಿಯ ಕೆಲಸ ಮಾಡಲು ಸಿದ್ಧ ಎನ್ನುವುದು ಸಾಬೀತಾಗಿದೆ ಎಂದು ಆರೋಪಿಸಲಾಗಿದೆ.
ಅಧಿಕಾರಕ್ಕಾಗಿ ನಡೆದ ಪೈಪೋಟಿ ಇದಾಗಿದೆ. ಅಧಿಕಾರಕ್ಕಾಗಿ ರಾಷ್ಟ್ರ ವಿರೋಧಿಗಳ ಜೊತೆ ಕೈಜೋಡಿಸಲು ಸಿದ್ದವಿದೆ ಎನ್ನುವುದು ಗೊತ್ತಾಗಿದೆ. ಅಖಂಡ ಶ್ರೀನಿವಾಸ ಮೂರ್ತಿಯನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವ ಕಾರ್ಯತಂತ್ರ ಇದಾಗಿದೆ ಎಂದು ವರದಿಯಲ್ಲಿ ಆಪಾದಿಸಲಾಗಿದೆ.
ಎಸ್ಡಿಪಿಐ ಸಂಘಟನೆಯನ್ನು ಇದಕ್ಕೆ ಬಳಸಿಕೊಂಡಿದೆ. ಇದು ಪೂರ್ವ ನಿಯೋಜಿತ ಕೃತ್ಯ ಎಂದು ವರದಿಯಲ್ಲೂ ಉಲ್ಲೇಖಿಸಲಾಗಿದೆ. ಪಾಲಿಕೆ ಸದಸ್ಯರಾದ ಅಬ್ದುಲ್ ಜಾಕಿರ್, ಸಂಪತ್ ರಾಜ್, ನಾಗರಬಾವಿ ಇರ್ಷಾದ್ ಬೇಗಂ ಪತಿ ಕಲೀಂ ಪಾಷಾ ಹೆಸರು ಉಲ್ಲೇಖಿಸಲಾಗಿದೆ. ಕಾಂಗ್ರೆಸ್ ಅಧಿಕಾರದ ಹುಚ್ಚು, ಕಾರ್ಯಕರ್ತರ ಅಧಿಕಾರದ ಲಾಲಸೆಯಿಂದ ಇದು ಸಂಭವಿಸಿದೆ. ಈ ವರದಿಯನ್ನು ಯಥಾಸ್ಥಿತಿಯಲ್ಲಿ ಸಿಎಂಗೆ ಹಸ್ತಾಂತರ ಮಾಡಿ ಬೇಡಿಕೆ ಜಾರಿಗೆ ಮನವಿ ಮಾಡಲಿದ್ದೇವೆ ಎಂದರು.