ಬೆಂಗಳೂರು : ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಸಂಬಂಧ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣಕ್ಕೆ ತಡೆ ನೀಡುವಂತೆ ಕೋರಿ ಬಿಬಿಎಂಪಿ ಮಾಜಿ ಮೇಯರ್ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಪ್ರಕರಣವನ್ನು ರದ್ದುಪಡಿಸುವಂತೆ ಹಾಗೂ ತಡೆ ನೀಡುವಂತೆ ಕೋರಿ ಸಂಪತ್ ರಾಜ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಿಶೇಷ ಅಭಿಯೋಜಕ ಪಿ. ಪ್ರಸನ್ನ ಕುಮಾರ್ ವಾದಿಸಿ, ಸಂಪತ್ ರಾಜ್ ಪೊಲೀಸರ ವಿಚಾರಣೆ ತಪ್ಪಿಸಿಕೊಂಡಿದ್ದಾರೆ. ಕೊರೊನಾ ನೆಪ ಹೇಳಿ ಆಸ್ಪತ್ರೆ ಸೇರಿದ್ದರು. 7 ವಾರ ಕಳೆದರೂ ಆಸ್ಪತ್ರೆಯಿಂದ ಹೊರಗೆ ಬಂದಿರಲಿಲ್ಲ. ಕೊರೊನಾ ಮತ್ತೆ ಬಂದಿದೆ ಎಂದು ನೆಪ ಹೇಳಿದ್ದರು ಎಂದು ಹೇಳಿದರು.
ಹೀಗೆ ಆಸ್ಪತ್ರೆ ಸೇರಿದ್ದ ಸಂಪತ್ ರಾಜ್ ಇದೀಗ ತಲೆ ಮರೆಸಿಕೊಂಡಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ಮುನ್ನ ಆಸ್ಪತ್ರೆಯವರು ಮಾಹಿತಿ ನೀಡಿಲ್ಲ. ಆದ್ದರಿಂದ ಪ್ರಕರಣಕ್ಕೆ ತಡೆ ನೀಡಬಾರದು ಎಂದು ಮನವಿ ಮಾಡಿದರು. ಎಸ್ಪಿಪಿ ವಾದ ಪರಿಗಣಿಸಿದ ಪೀಠ, ಪ್ರಕರಣಕ್ಕ ತಡೆ ನೀಡಲು ನಿರಾಕರಿಸಿತು.