ಬೆಂಗಳೂರು: ರಾಜ್ಯದ ಉಂಟಾಗಿರುವ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 82ಕ್ಕೆ ಏರಿಕೆಯಾಗಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ.
ಕೃಷ್ಣ ಮೇಲ್ದಂಡೆ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಇದರ ಪರಿಣಾಮ ಬೆಳಗಾವಿ ಜಿಲ್ಲೆಯ ಗಡಿಯಲ್ಲಿ 0.64 ಲಕ್ಷ ಕ್ಯೂಸೆಕ್ ನೀರಿನ ಹರಿವು ಕಂಡುಬಂದಿದೆ. ಪ್ರವಾಹಕ್ಕೆ ತುತ್ತಾಗಿ ಬೆಳಗಾವಿಯಲ್ಲಿ 19 ಮಂದಿ ಸಾವಿಗೀಡಾಗಿದ್ದರೆ, ಕೊಡಗಿನಲ್ಲಿ 13, ಶಿವಮೊಗ್ಗದಲ್ಲಿ 10, ಚಿಕ್ಕಮಗಳೂರಿನಲ್ಲಿ 10 ಹಾಗೂ ಮೈಸೂರಿನಲ್ಲಿ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಉಳಿದಂತೆ ಉತ್ತರ ಕನ್ನಡ, ಹಾಸನ, ಉಡುಪಿ, ಧಾರವಾಡದಲ್ಲಿ ತಲಾ 4 ಮಂದಿ ಹಾಗೂ ಬಾಗಲಕೋಟೆಯಲ್ಲಿ 3 ಮಂದಿ ಸಾವಿಗೀಡಾಗಿದ್ದು, ಗದಗ, ಯಾದಗಿರಿ, ದಾವಣಗೆರೆ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಇನ್ನು, ಕೊಡಗಿನಲ್ಲಿ 3, ಹಾವೇರಿಯಲ್ಲಿ ಒಬ್ಬರು ಬೆಳಗಾವಿಯಲ್ಲಿ 5 ಮಂದಿ ಎಂದು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ನೆರೆ ಪ್ರಮಾಣ ಇಳಿಮುಖವಾಗಿದೆ. ಇತ್ತ ಆಲಮಟ್ಟಿ ಜಲಾಶಯ ಸೇರಿದಂತೆ ಪ್ರಮುಖ ಜಲಾಶಯಗಳಿಂದ ಹೊರ ಬಿಡುವ ನೀರಿನ ಪ್ರಮಾಣವನ್ನೂ ಕಡಿಮೆಗೊಳಿಸಲಾಗಿದೆ.
ವರುಣಾಘಾತಕ್ಕೆ ಸಂಭವಿಸಿದ ಹಾನಿ ವಿವರ:
- ಒಟ್ಟು ಸಂಭವಿಸಿದ ಸಾವು -82
- ನಾಪತ್ತೆಯಾದವರ ಸಂಖ್ಯೆ- 9
- ಜಾನುವಾರುಗಳ ಸಾವು -992
- ಒಟ್ಟು ರಕ್ಷಿಸಲ್ಪಟ್ಟ ಸಂತ್ರಸ್ತರು- 2,10,095
- ಪ್ರವಾಹ ಪೀಡಿತ ಜಿಲ್ಲೆ -22
- ಪ್ರವಾಹ ಪೀಡಿತ ತಾಲೂಕು- 103
- ಒಟ್ಟು ಬೆಳೆ ಹಾನಿ- 7.5ಲಕ್ಷ ಹೆಕ್ಟೇರ್
- ಒಟ್ಟು ಮನೆಗಳ ಹಾನಿ -75,317