ಬೆಂಗಳೂರು: ರಾಜ್ಯದಲ್ಲಿ ಜಿಲ್ಲಾ ಖನಿಜ ನಿಧಿ (ಡಿಎಂಎಫ್)ಯನ್ನು ಗಣಿಬಾಧಿತ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯ ಧ್ಯೇಯೋದ್ದೇಶದಿಂದ ಪ್ರಾರಂಭಿಸಲಾಗಿದೆ. ಆದರೆ ಖನಿಜ ನಿಧಿಯಲ್ಲಿ ಸಾವಿರಾರು ಕೋಟಿ ಹಣ ಇದ್ದರೂ, ಕೆಲಸ ಮಾತ್ರ ಮರೀಚಿಕೆಯಾಗೇ ಉಳಿದಿದೆ. ಅಷ್ಟಕ್ಕೂ ಜಿಲ್ಲಾ ಖನಿಜ ನಿಧಿಯ ದುರವಸ್ಥೆ ಹೇಗಿದೆ ಎಂಬ ವರದಿ ಇಲ್ಲಿದೆ.
ಗಣಿಗಾರಿಕೆಯಿಂದ ನಲುಗಿಹೋಗಿರುವ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯ, ಪರಿಸರ ಸಂರಕ್ಷಣೆ ಕೈಗೊಳ್ಳಲು ಜಿಲ್ಲಾ ಖನಿಜ ನಿಧಿ ಸ್ಥಾಪಿಸಲಾಗಿದೆ. 2015ರಿಂದ ಜಿಲ್ಲಾ ಖನಿಜ ನಿಧಿ ಪ್ರಾರಂಭಗೊಂಡಿದೆ. ಗಣಿಗಾರಿಕೆ ಕಾರ್ಯಾಚರಣೆಪೀಡಿತ ಜಿಲ್ಲೆಗಳಲ್ಲಿ ಪ್ರತಿ ಜಿಲ್ಲಾ ಖನಿಜ ಪ್ರತಿಷ್ಠಾನವನ್ನು ರಾಜ್ಯ ಸರ್ಕಾರ ಟ್ರಸ್ಟ್ ಅಥವಾ ಲಾಭರಹಿತ ಸಂಸ್ಥೆಯಾಗಿ ಅಧಿಸೂಚನೆ ಮೂಲಕ ಸ್ಥಾಪಿಸಿವೆ. ಗಣಿಗಾರಿಕೆ ಚಟುವಟಿಕೆಗಳಿಂದ ಹಾನಿಗೊಳಗಾದ ವ್ಯಕ್ತಿಗಳು ಮತ್ತು ಪ್ರದೇಶಗಳ ಅನುಕೂಲಕ್ಕಾಗಿ ಹಾಗು ಅಭಿವೃದ್ಧಿಗಾಗಿ ಕೆಲಸ ಮಾಡುವುದು ಜಿಲ್ಲಾ ಖನಿಜ ಪ್ರತಿಷ್ಠಾನದ ಉದ್ದೇಶ.
ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ ಮಾರ್ಗಸೂಚಿ ಅನ್ವಯ ಈ ನಿಧಿಯನ್ನು ಕುಡಿಯುವ ನೀರು, ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೌಶಲ ಅಭಿವೃದ್ಧಿಗೆ ಶೇ 60ರಷ್ಟು, ಮೂಲಸೌಕರ್ಯ, ನೀರಾವರಿ, ಪರಿಸರ ಗುಣಮಟ್ಟ ಹೆಚ್ಚಳಕ್ಕೆ ಶೇ 40ರಷ್ಟು ಖರ್ಚು ಮಾಡಲು ಅವಕಾಶ ನೀಡಲಾಗಿದೆ. ಆದರೆ ಖನಿಜ ನಿಧಿಯ ಬಳಕೆ ಮಾತ್ರ ಅಷ್ಟಕ್ಕಷ್ಟೇ. ಖನಿಜ ನಿಧಿಯಡಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಮಾತ್ರ ತೆವಳುತ್ತಾ ಸಾಗುತ್ತಿದೆ.
ಬಳಕೆಯಾಗದೇ ಉಳಿದ ಸಾವಿರಾರು ಕೋಟಿ ಖನಿಜ ನಿಧಿ: ಖನಿಜ ನಿಧಿಯಲ್ಲಿ ಸಾವಿರಾರು ಕೋಟಿ ಹಣ ಬಳಕೆಯಾಗದೇ ಹಾಗೇ ಬ್ಯಾಂಕ್ ಖಾತೆಗಳಲ್ಲಿ ಉಳಿದುಕೊಂಡಿದೆ. ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ನೀಡಿದ ಅಂಕಿ-ಅಂಶದ ಪ್ರಕಾರ, 2015-16ರಿಂದ 2021-22ರವರೆಗೆ ಬರೋಬ್ಬರಿ 3,309.95 ಕೋಟಿ ರೂ. ಡಿಎಂಎಫ್ ಹಣ ಸಂಗ್ರಹಿಸಲಾಗಿದೆ. ಆದರೆ, ಈ ಪೈಕಿ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗಿದ್ದು ಕೇವಲ 41% ಮಾತ್ರ. ಬ್ಯಾಂಕ್ ಖಾತೆಗಳಲ್ಲಿ ಬಳಕೆಯಾಗದೆ 2,000 ಕೋಟಿ ರೂ. ಆಸುಪಾಸು ಖನಿಜ ನಿಧಿ ಉಳಿದುಕೊಂಡಿದೆ.
ಈಗಾಗಲೇ ಸುಮಾರು 3,724.75 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದೆ. ಆದರೆ ಇದುವರೆಗೆ 1,164.37 ಕೋಟಿ ರೂ. ಖನಿಜ ನಿಧಿ ಮಾತ್ರ ಖರ್ಚಾಗಿದೆ. ಕೋವಿಡ್ಗಾಗಿನ ವೆಚ್ಚವೂ ಸೇರಿ ಮಾರ್ಚ್ 2022ರವರೆಗೆ ಒಟ್ಟು 1,363.95 ಕೋಟಿ ರೂ. ಖನಿಜ ನಿಧಿ ಹಣ ವೆಚ್ಚ ಮಾಡಲಾಗಿದೆ ಎಂದು ಗಣಿ ಇಲಾಖೆ ಮಾಹಿತಿ ನೀಡಿದೆ. ಇದರ ಜೊತೆಗೆ ಖನಿಜ ನಿಧಿ ಹಣವನ್ನು ಕೋವಿಡ್ ನಿರ್ವಹಣೆಗಾಗಿ ಬಳಕೆ ಮಾಡಲಾಗಿದೆ. ಇಲ್ಲಿವರೆಗೆ ಕೋವಿಡ್ಗಾಗಿ ಸುಮಾರು 199.58 ಕೋಟಿ ರೂ. ಖನಿಜ ನಿಧಿ ಹಣ ಖರ್ಚು ಮಾಡಲಾಗಿದೆ.
ಕಾಮಗಾರಿಗಳ ಪ್ರಗತಿಯ ಸ್ಥಿತಿಗತಿ ಏನಿದೆ?: ಗಣಿಬಾಧಿತ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಖನಿಜ ನಿಧಿ ಹಣವನ್ನು ಬಳಸಲಾಗುತ್ತದೆ. 9,260 ವಿವಿಧ ಯೋಜನೆಗಳನ್ನು ಖನಿಜ ನಿಧಿಯಡಿ ಎಲ್ಲಾ ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಬೇಕಾಗಿದೆ. ಈ ಪೈಕಿ 2,745 ಯೋಜನೆಗಳು ಗಣಿ ಬಾಧಿತ ಪ್ರದೇಶಗಳಲ್ಲಿ ಚಾಲ್ತಿಯಲ್ಲಿವೆ.
ಮಾರ್ಚ್ 2022 ಅಂತ್ಯಕ್ಕೆ 3,270 ಯೋಜನಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಇಲಾಖೆ ತಿಳಿಸಿದೆ. 2,476 ಯೋಜನೆ ಕಾಮಗಾರಿಗಳು ಇನ್ನೂ ಪ್ರಾರಂಭವೇ ಆಗಿಲ್ಲ. 769 ಕಾಮಗಾರಿಗಳನ್ನು ರದ್ದುಗೊಳಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 2,524 ಅಭಿವೃದ್ಧಿ ಕಾಮಗಾರಿಗಳ ಪೈಕಿ 805 ಪೂರ್ಣವಾಗಿದೆ. 719 ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. 402 ಅಭಿವೃದ್ಧಿ ಕಾಮಗಾರಿಗಳನ್ನು ರದ್ದುಗೊಳಿಸಲಾಗಿದೆ.
ಸಮನ್ವಯತೆ ಕೊರತೆ, ಅಭಿವೃದ್ಧಿ ಶೂನ್ಯ: ಖನಿಜ ನಿಧಿಯಡಿ 18 ಇಲಾಖೆಗಳಿಗೆ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಕೆ ಹಾಗೂ ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ನೀಡಲಾಗುತ್ತದೆ. ಆದರೆ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆಯಿಂದ ಈ ನಿಧಿ ಹಣ ನಿಗದಿತ ಅವಧಿಯಲ್ಲಿ ಬಳಕೆಯಾಗುತ್ತಿಲ್ಲ. ಅಭಿವೃದ್ಧಿ ಕಾಮಗಾರಿಗಳು ತೆವಳುತ್ತಾ ಸಾಗುತ್ತಿರುವ ಕಾರಣ ಗಣಿ ಬಾಧಿತ ಜಿಲ್ಲೆಗಳ ಪರಿಸ್ಥಿತಿ ಹಾಗೇ ಉಳಿದುಕೊಂಡಿದೆ. ಇದರಿಂದ ಖನಿಜ ನಿಧಿಯ ಉದ್ದೇಶ ಈಡೇರುತ್ತಿಲ್ಲ ಎಂದು ಅಧಿಕಾರಿಗಳೇ ಹೇಳುತ್ತಾರೆ.
ಇದನ್ನೂ ಓದಿ: ಬಡವರಿಗಾಗಿ ರೂಪಿಸಿರುವ ಯೋಜನೆಗಳ ಸಕಾಲಿಕ ಅನುಷ್ಠಾನಕ್ಕೆ ಸಿಎಂ ಸೂಚನೆ