ಬೆಂಗಳೂರು: ಮದ್ಯದಂಗಡಿಗಳ ಲೈಸೆನ್ಸ್‌ಗಳನ್ನು ವಿಧಾನಸಭಾ ಕ್ಷೇತ್ರದ ಲೆಕ್ಕದಲ್ಲಿ ಹಂಚಿಕೆ ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ, ಬೆಳಗಾವಿ ಜಿಲ್ಲೆಯ ಮಲ್ಲನಗೌಡ ಯಲ್ಲನಗೌಡ ಸುರಾಗ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲ ಜಿ.ಕೆ. ಭಟ್ ಅವರು ವಿವರಿಸಿ, ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಎಸ್ಐಎಲ್ ಸಂಸ್ಥೆಗೆ ಹೊಸದಾಗಿ ಸಿಎಲ್–11ಸಿ ಸನ್ನದು (ಲೈಸೆನ್ಸ್) ನೀಡಿರುವ ಕ್ರಮ ಸರಿಯಲ್ಲ. ಈ ಕುರಿತು ಅಬಕಾರಿ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶ ಏಕಪಕ್ಷೀಯವಾಗಿದೆ ಮತ್ತು ಸ್ವೇಚ್ಛೆಯಿಂದ ಕೂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ವಿಧಾನಸಭಾ ಕ್ಷೇತ್ರದ ಲೆಕ್ಕದಲ್ಲಿ ಹೇಗೆ ಹಂಚಿಕೆ ಮಾಡುತ್ತೀರಿ? ಜನಸಂಖ್ಯೆ ಅಥವಾ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಹಂಚಿಕೆ ಮಾಡಿದ್ದರೆ ಸರಿಹೋಗುತ್ತಿರಲಿಲ್ಲವೇ ಎಂದು ಪ್ರಶ್ನಿಸಿತು. ಹಾಗೆಯೇ, ಎಂಎಸ್‌ಐಎಲ್ ವತಿಯಿಂದ ನಡೆಯುತ್ತಿರುವ ಮದ್ಯದಂಗಡಿಗಳ ಕುರಿತು ವಿವರಣೆ ನೀಡಿ, ಇಲ್ಲಿ ಕೆಲಸ ಮಾಡುವವರನ್ನು ಎಂಎಸ್‌ಐಎಲ್ ನೇರವಾಗಿ ನೇಮಕ ಮಾಡಿಕೊಳ್ಳುತ್ತದೆಯೋ ಅಥವಾ ಗುತ್ತಿಗೆ ಆಧಾರದಲ್ಲಿ ನೇಮಿಸುತ್ತಾರೋ ಎಂಬುದನ್ನು ತಿಳಿಸಿ. ಮುಂದಿನ ನಾಲ್ಕು ವಾರಗಳಲ್ಲಿ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಿ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆyನ್ನು ಮುಂದೂಡಿತು.