ಬೆಂಗಳೂರು: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಡಾ. ಮಹರ್ಷಿ ಆನಂದ ಗುರೂಜಿ ಮತ್ತು ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿ ಪವಿತ್ರ ಗಂಗಾಜಲ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುರಾತನ ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪವಿತ್ರ ಗಂಗಾ ಜಲದಿಂದ ಅಭಿಷೇಕ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ, ತುಳಸಿತೋಟ ಕೃಷ್ಣ ದೇವಸ್ಥಾನದಿಂದ 30 ವಾಹನಗಳಲ್ಲಿ ಪವಿತ್ರ ಗಂಗಾಜಲವನ್ನು ಎಲ್ಲ ಜಿಲ್ಲಾ ಕೇಂದ್ರಗಳಿಗೆ ರವಾನೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹರ್ಷಿ ಆನಂದ ಗುರೂಜಿ "ಗಂಗಾ ಪಾನ, ತುಂಗಾ ಸ್ನಾನ ಎಂದು ಹಿಂದೂ ಪುರಾಣಗಳಲ್ಲಿ ಉಲ್ಲೇಖವಿದೆ. ಪವಿತ್ರ ಗಂಗಾ ಜಲ ತೀರ್ಥರೂಪದಲ್ಲಿ ಸೇವನೆ, ತುಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಸಕಲ ಪಾಪಗಳು ಪರಿಹಾರವಾಗಿ, ಬರುವ ಸಂಕಷ್ಟಗಳು ದೂರವಾಗಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಅಚಲವಾದ ನಂಬಿಕೆಯಿದೆ" ಎಂದು ಹೇಳಿದರು.

2 ವರ್ಷ ಕೋವಿಡ್ ಕಾರಣ ಅಡೆ-ತಡೆ: ಎರಡು ವರ್ಷಗಳ ಸಾಂಕ್ರಮಿಕ ರೋಗದಿಂದ ಶಿವರಾತ್ರಿ ಅಚರಣೆಗೆ ಸ್ವಲ್ಪ ಅಡೆತಡೆ ಉಂಟಾಗಿತ್ತು. ಅದರೆ ಈ ವರ್ಷ ಯಾವುದೇ ತೊಂದರೆ ಇಲ್ಲ. ಶಿವನನ್ನು ನಂಬಿದರೆ ಎಂದು ನಮ್ಮನ್ನ ಕೈ ಬಿಡುವುದಿಲ್ಲ. ಸಾಂಕ್ರಮಿಕ ರೋಗದಿಂದ ಇಡಿ ವಿಶ್ವವೇ ಸಂಕಷ್ಟದಲ್ಲಿ ಇಂದು ಸಹ ನರಳುತ್ತಿದೆ. ಆದರೆ ಭಾರತ ದೇಶ ಕಡಿಮೆ ಸಾವು, ನೋವು ಸಂಭವಿಸಿ, ಯಾವುದೇ ಅಡ್ಡಿ ಅತಂಕವಿಲ್ಲದೇ ದೇಶ ಬಲಿಷ್ಠ ರೀತಿಯಲ್ಲಿ ಸಾಗುತ್ತಿದೆ. ಶಿವನ ಆಶೀರ್ವಾದ, ದೈವದಲ್ಲಿ ಭಕ್ತಿಯಿಂದ ಮತ್ತು ಆತ್ಮಸ್ಥರ್ಯದಿಂದ ಬಂದ ಕಷ್ಟಗಳನ್ನು ಎದುರಿಸಿದ ಕಾರಣದಿಂದ ನಮ್ಮ ದೇಶದ ಜನರು ಸುರಕ್ಷತೆಯಾಗಿ ಇದ್ದಾರೆ ಎಂದು ಹೇಳಿದರು.

ಪ್ರತಿ ವರ್ಷ ಗಂಗಾ ಜಲ ವಿತರಣೆ: ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿ ಮಾತನಾಡಿ, "ನಾನು ಮುಜರಾಯಿ ಸಚಿವನಾಗಿದ್ದಾಗ ರಾಜ್ಯದ ಜನತೆಗೆ ಕೊಟ್ಟ ಮಾತಿನ ಪ್ರಕಾರ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪವಿತ್ರ ಗಂಗಾ ಜಲವನ್ನು ವಿತರಣೆ ಮಾಡಲಾಗುತ್ತಿದೆ. ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ರಾಜ್ಯದ ಎಲ್ಲಾ ಭಾಗಗಳಲ್ಲಿರುವಂಥ ಪುರಾತನ 3 ಸಾವಿರ ಶಿವನ ದೇವಾಲಯಗಳಲ್ಲಿ ಶಿವನ ಮೂರ್ತಿಗೆ ಅಭಿಷೇಕ ಮತ್ತು ತೀರ್ಥ ವಿನಿಯೋಗಕ್ಕಾಗಿ ಹಾಗೂ ಎಲ್ಲಾ ಭಕ್ತಾದಿಗಳಿಗೆ ಪವಿತ್ರ ಗಂಗಾ ಜಲ ತಲುಪಿಸುವ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಿಗೆ ಸುಮಾರು 30 ವಾಹನಗಳಲ್ಲಿ ಸರಬರಾಜು ಮಾಡಲಾಗುತ್ತದೆ. ಹಿಂದೂವಾಗಿ ಹುಟ್ಟಿ, ಹಿಂದೂಗಳ ಸೇವೆ ಮಾಡುವ ಪುಣ್ಯದ ಕೆಲಸ" ಎಂದು ಹೇಳಿದರು.
ಶಿವನ ದೇವಾಲಯಗಳಿಗೆ ಸರಬರಾಜು: ಬಳೆಪೇಟೆಯಲ್ಲಿರುವ ಅತಿ ಪುರಾತನ ದೇವಾಲಯ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯ ಅವರಣದಲ್ಲಿ ಹರಿದ್ವಾರದಿಂದ ತಂದ ಗಂಗಾಜಲವನ್ನು 3 ಸಾವಿರ ಶಿವ ದೇವಾಲಯ ಅಭಿಷೇಕಕ್ಕೆ ಮತ್ತು ಲಕ್ಷಾಂತರ ಭಕ್ತರಿಗೆ ವಿತರಿಸುವ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಶಿವಾಲಯಗಳಿಗೆ ಹಾಗೂ ಖಾಸಗಿ ಒಡೆತನದಲ್ಲಿರುವ ಶಿವನ ದೇವಸ್ಥಾನಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಸ್ಪೂರ್ತಿದಾಯಕ ಕಥೆ: ನೀರಿಗಾಗಿ ಪ್ರಪಂಚದಾದ್ಯಂತ ಮ್ಯಾರಾಥಾನ್; ಜಲ ಸಂರಕ್ಷಣೆಯೇ ಇವರ ಗುರಿ