ಬೆಂಗಳೂರು: ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಇಂದು ಕಮಲಾನಗರ ವಾರ್ಡ್ ಹಾಗೂ ರಾಜಾಜಿನಗರದ ರಾಮಮಂದಿರ ವಾರ್ಡ್ನ ಬಡವರಿಗೆ ಹಾಗೂ ನಿರಾಶ್ರಿತರಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕೋವಿಡ್- 19 ಮಹಾಮಾರಿ ನಿಯಂತ್ರಣಕ್ಕಾಗಿ ರಚಿಸಿರುವ ಕೆಪಿಸಿಸಿ ಕಾರ್ಯಪಡೆಯ ಬೆಂಗಳೂರು ನಗರ ಅಧ್ಯಕ್ಷ ರಾಮಲಿಂಗಾರೆಡ್ಡಿ ಸೂಚನೆ ಮೇರೆಗೆ, ನಗರದ 28 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಸಂಘಟಿತ ಕಾರ್ಮಿಕರಿಗೆ, ಹೊರರಾಜ್ಯದಿಂದ ಬಂದಿರುವ ಕೂಲಿ ಕಾರ್ಮಿಕರಿಗೆ ಹಾಗೂ ನಿರಾಶ್ರಿತರಿಗೆ ಉಪಾಹಾರ ಮತ್ತು ಅಗತ್ಯ ವಸ್ತುಗಳನ್ನು ನೀಡಲಾಯಿತು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಶಾಸಕರು, ಮಾಜಿ ಶಾಸಕರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು, ಪಾಲಿಕೆ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸುರಕ್ಷಿತ ಹಾಗೂ ಪೌಷ್ಠಿಕ ಆಹಾರ ವಿತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಬೆಂಗಳೂರು ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಿರಾಶ್ರಿತರಿಗೆ ಹಾಗೂ ಬಡವರಿಗೆ ಆಹಾರ ಮತ್ತು ಅಗತ್ಯ ಆಹಾರ ಪದಾರ್ಥಗಳನ್ನು ದಿನನಿತ್ಯ ವಿತರಿಸಲಾಗುತ್ತಿದೆ ಎಂದು ಇಂದಿನ ಕಾರ್ಯಕ್ರಮದ ಆಯೋಜಕ ಜಿ. ಜನಾರ್ದನ ತಿಳಿಸಿದರು.