ಬೆಂಗಳೂರು: ಇಲ್ಲಿನ ಶಾಂತಿನಗರ ಬಸ್ ನಿಲ್ದಾಣದಲ್ಲಿ ಕೊರೊನಾ ವಾರಿಯರ್ಸ್ಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬಿಎಂಟಿಸಿ ನೌಕರರಿಗೆ ಮಿಸಸ್ ಇಂಡಿಯಾ ಕರ್ನಾಟಕ ಹಾಗೂ ಅಕಿರಾ ಇವೆಂಟ್ಸ್ ಸಂಸ್ಥೆಯು ಮುಖ ಕವಚವನ್ನು ಉಚಿತವಾಗಿ ವಿತರಿಸಿದೆ.
ಈ ಸಂದರ್ಭ ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯ ಆಯೋಜಕಿ, ನಿರ್ದೇಶಕಿ ಹಾಗೂ ಮಿಸೆಸ್ ಏಷ್ಯಾ ಇಂಟರ್ನ್ಯಾಷನಲ್ ಪ್ರತಿಭಾ ಸಂಶಿಮಠ ಮಾತನಾಡಿ, ಈಗಾಗಲೇ ಬಿಎಂಟಿಸಿ ಸಿಬ್ಬಂದಿ ಸಾರ್ವಜನಿಕರಿಗೆ ಮಹತ್ತರ ಸೇವೆ ಸಲ್ಲಿಸುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲಿ ನಾವು ಸಾಕಷ್ಟು ಜನ ಮನೆಯಲ್ಲಿಯೇ ಇದ್ದೆವು. ಆದರೆ ಇವರು ತುರ್ತು ಸೇವೆಗಳಿಗಾಗಿ ರಸ್ತೆಯಲ್ಲಿದ್ದರು. ಪ್ರಸ್ತುತ ಬಸ್ ಸಂಚಾರ ಸೇವೆಗಳು ಪುನಾರಂಭಗೊಂಡಿದ್ದು, ಸಿಬ್ಬಂದಿ ನಿರ್ಭಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸೇವೆ ಅಪಾರವಾದುದ್ದರಿಂದ ನಾವು ಅವರ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದು ತಿಳಿಸಿದರು.
ಬಿಎಂಟಿಸಿ ವಿಭಾಗೀಯ ನಿಯಂತ್ರಕರಾದ ಜಗದೀಶ್ ಮಾತನಾಡಿ, ನಮ್ಮ ಸಿಬ್ಬಂದಿ ಅಪಾಯ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಗುರುತಿಸಿ ಅವರ ಸುರಕ್ಷತೆಗಾಗಿ ಮುಖ ಕವಚಗಳನ್ನು ವಿತರಿಸಿರುವುದು ತುಂಬಾ ಸಂತಸದ ವಿಷಯ ಎಂದರು.
ಮುಖ ಕವಚ ಪಡೆದ ಬಿಎಂಟಿಸಿ ಸಿಬ್ಬಂದಿಯೊಬ್ಬರು ಮಾತನಾಡಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ನಿರತರಾಗಿದ್ದೇವೆ. ಇನ್ನಷ್ಟು ಧೈರ್ಯದಿಂದ ಮತ್ತು ಜಾಗರೂಕರಾಗಿ ನಮ್ಮ ಕಾರ್ಯನಿರ್ವಹಿಸಬೇಕಿದೆ. ಆದ್ದರಿಂದ ಈ ಮುಖ ಕವಚಗಳು ನಮಗೆ ಮತ್ತಷ್ಟು ಸಹಾಯವಾಗುತ್ತವೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮೀಡಿಯಾ ಕನೆಕ್ಟ್ ಸಿಇಒ ದಿವ್ಯಾ ರಂಗೇನಹಳ್ಳಿ, ಅಕಿರಾ ಇವೆಂಟ್ಸ್ ನ ನಿರ್ದೇಶಕಿ ಲಕ್ಷ್ಮೀ ಸಿ. ಪಿ ಹಾಗೂ ಬಿಎಂಟಿಸಿ ಘಟಕ ವ್ಯವಸ್ಥಾಪಕ ಪ್ರಕಾಶ್ ಇದ್ದರು.