ಬೆಂಗಳೂರು : ಕಳೆದ ವಾರವಷ್ಟೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹೈಕೋರ್ಟ್ನಲ್ಲಿ ಕಲಾಪ ನಡೆಸುತ್ತಿದ್ದಾಗ ಅಶ್ಲೀಲ ಚಿತ್ರ ಬಳಸಿದ್ದ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಾದ ಬೆನ್ನಲೇ ಮತ್ತೆ ಇದೇ ರೀತಿಯ ಕೃತ್ಯವನ್ನು ಆರೋಪಿಗಳು ಎಸಗಿದ್ದಾರೆ. ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯವು (ಕೆಎಟಿ) ಆನ್ ಲೈನ್ ಮೂಲಕ ನ್ಯಾಯಾಂಗ ಕಲಾಪ ನಡೆಸುತ್ತಿದ್ದಾಗ ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದಾರೆ. ಈ ಸಂಬಂಧ ನಗರ ಕೇಂದ್ರ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಟಿ ರಿಜಿಸ್ಟರ್ ವಿನೀತಾ ಪಿ.ಶೆಟ್ಟಿ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ-2008ರ ಸೆಕ್ಷನ್ 67, 67 ಎ ಅಡಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಡಿಸೆಂಬರ್ 8 ರಂದು ರಾಜ್ಯ ಆಡಳಿತ ಮಂಡಳಿಯ ಹಾಲ್ ನಂ-1ರಲ್ಲಿ ನ್ಯಾಯಾಧೀಶರು ವಿಡಿಯೋ ಕಾನ್ಫರೆನ್ಸ್ ನಡೆಸುವಾಗ ಅಪರಿಚಿತರು ಲಾಗಿನ್ ಆಗಿ ಅಶ್ಲೀಲ ಚಿತ್ರೀಕರಣದ ದೃಶ್ಯಗಳನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ನ್ಯಾಯಾಂಗ ಕಲಾಪಕ್ಕೆ ಅಡ್ಡಿಪಡಿಸುವುದಲ್ಲದೇ ನ್ಯಾಯಾಧೀಶರಿಗೆ ಅಗೌರವ ತೋರಿದ್ದಾರೆ. ಕೂಡಲೇ ಆನ್ ಲೈನ್ ಕಲಾಪ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಕೆಎಟಿ ರಿಜಿಸ್ಟರ್ ವಿನೀತಾ ಪಿ.ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಅನುಚಿತವಾಗಿ ವರ್ತಿಸಿ ಅಶ್ಲೀಲ ಚಿತ್ರ ಪ್ರದರ್ಶಿಸಿ ಕಲಾಪಕ್ಕೆ ಅಡ್ಡಿ ಉಂಟು ಮಾಡಿದ್ದ ಕಿಡಿಗೇಡಿಗಳ ವಿರುದ್ಧ ನಗರ ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ದಾಖಲಾಗಿತ್ತು. ನ್ಯಾಯಾಲಯದ ಹಾಲ್ ನಂಬರ್ ನ 6, 12,18,23 ಹಾಗೂ 26 ಹಾಲ್ ಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಲಾಪ ನಡೆಸುತ್ತಿದ್ದರು. ವಿಡಿಯೊ ಲಿಂಕ್ ಮೂಲಕ ನಡೆಯುತ್ತಿದ್ದ ವಿಚಾರಣೆ ವೇಳೆ ವಕೀಲರು ಹಾಗೂ ಕಕ್ಷಿದಾರರು ಕಲಾಪದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಅಪರಿಚಿತರು ಲಿಂಕ್ ಮೂಲಕ ಲಾಗಿನ್ ಆಗಿ ಅನುಚಿತವಾಗಿ ವರ್ತಿಸಿ ಅಶ್ಲೀಲ ಚಿತ್ರಗಳನ್ನ ಪ್ರದರ್ಶಿಸಿದ್ದರು. ಈ ಮೂಲಕ ನ್ಯಾಯಾಲಯದ ವಿಚಾರಣೆಗೆ ಅಡ್ಡಿಪಡಿಸಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಹೈಕೋರ್ಟ್ ನ ಗಣಕೀಕರಣ ವಿಭಾಗದ ರಿಜಿಸ್ಟರ್ ಸುರೇಶ್ ಅವರು ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಗೂಂಡಾ ಕಾಯಿದೆಯಡಿ ಬಂಧಿತನಾದವನಿಗೆ ಆತನ ಭಾಷೆಯಲ್ಲಿ ವಿವರಿಸಲು ಪೊಲೀಸರು ವಿಫಲ; ಆರೋಪಿ ಬಿಡುಗಡೆಗೆ ಹೈಕೋರ್ಟ್ ಆದೇಶ