ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ವಿಶ್ವಾಸ ಮತಯಾಚನೆ ಮಾಡುವ ಸಂದರ್ಭದಲ್ಲಿ ಸದನಕ್ಕೆ ಗೈರು ಹಾಜರಾಗುವ ಮೂಲಕ ಸದಸ್ಯತ್ವದಿಂದ ಅನರ್ಹರಾದ ಶಾಸಕರ ಕೇಸ್ ನಾಳೆ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಹೆಚ್.ವಿಶ್ವನಾಥ್, ಎಸ್.ಟಿ.ಸೋಮಶೇಖರ್, ಮುನಿರತ್ನ, ರಮೇಶ್ ಜಾರಕಿಹೊಳಿ, ಕೆ.ಗೋಪಾಲಯ್ಯ, ಭೈರತಿ ಬಸವರಾಜು, ಎಂಟಿಬಿ ನಾಗರಾಜ್, ಮಹೇಶ್ ಕುಮಟಳ್ಳಿ ಸೇರಿದಂತೆ ಒಟ್ಟು 17 ಮಂದಿ ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೈತ್ರಿ ಸರ್ಕಾರ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಸದನಕ್ಕೆ ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಒಟ್ಟು ಹದಿನೇಳು ಮಂದಿ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ಆದೇಶ ನೀಡಿದ್ದರು.
ಇದರ ಬೆನ್ನಲ್ಲೇ ಸ್ಪೀಕರ್ ತೀರ್ಮಾನವನ್ನು ಪ್ರಶ್ನಿಸಿ ಶಾಸಕ ಸ್ಥಾನದಿಂದ ಅನರ್ಹಗೊಂಡವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರಾದರೂ ತಕ್ಷಣಕ್ಕೆ ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿರಲಿಲ್ಲ. ಆದರೆ ಇದೀಗ ಸುಪ್ರೀಂಕೋರ್ಟ್ ನಾಳೆ ಶಾಸಕ ಸ್ಥಾನದಿಂದ ಅನರ್ಹಗೊಂಡವರ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳುವ ಸಾಧ್ಯತೆ ಇದೆ.
ಸ್ಪೀಕರ್ ರಮೇಶ್ ಕುಮಾರ್ ಅವರ ತೀರ್ಪನ್ನು ಮರು ಪರಿಶೀಲಿಸಲು ಕರ್ನಾಟಕದ ವಿಧಾನಸಭಾಧ್ಯಕ್ಷರಿಗೆ ಈ ಪ್ರಕರಣವನ್ನು ಹಿಂತಿರುಗಿಸಬೇಕು ಎಂದು ಹದಿನೇಳು ಮಂದಿ ಶಾಸಕರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಮ್ಮನ್ನು ಅನರ್ಹಗೊಳಿಸುವ ಮುನ್ನ ನ್ಯಾಯವನ್ನು ಪಾಲಿಸಲಾಗಿಲ್ಲ. ರಾಜೀನಾಮೆ ನೀಡಿದ ಕುರಿತು ವಿವರ ಪಡೆಯಲು ನಮ್ಮನ್ನು ವಿಚಾರಣೆಗೂ ಕರೆದಿಲ್ಲ. ಬದಲಿಗೆ ಏಕಪಕ್ಷೀಯವಾಗಿ ನಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ತೀರ್ಪು ನೀಡಲಾಗಿದೆ. ಹೀಗಾಗಿ ಪ್ರಕರಣವನ್ನು ಮರಳಿ ವಿಧಾನಸಭಾಧ್ಯಕ್ಷರಿಗೆ ವಹಿಸಬೇಕು ಎಂದು ಈ ಶಾಸಕರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.