ಬೆಂಗಳೂರು: ಯಶವಂತಪುರ ಅನರ್ಹ ಕಾಂಗ್ರೆಸ್ ಶಾಸಕ ಎಸ್ ಟಿ ಸೋಮಶೇಖರ್ ತಮ್ಮ ವೈಯಕ್ತಿಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಕೆಂಗೇರಿ ಉಪನಗರದ ಬಂಡೆಮಠ ರಸ್ತೆಯ ಶ್ರೀ ಬಂಡೇಶ್ವರ ಸ್ವಾಮಿ ಶಿವಯೋಗಿಗಳ ಭವನದಲ್ಲಿ ಕ್ಷೇತ್ರದ ಮುಖಂಡರ ಜೊತೆ ಮಹತ್ವದ ಸಭೆ ನಡೆಸಿ ಮೈತ್ರಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉಪಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ ಶಾಸಕ ಎಸ್ ಟಿ ಸೋಮಶೇಖರ್ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಇಂದು ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ತಮ್ಮ ಈ ಪರಿಸ್ಥಿತಿಗೆ ಕೆಲ ಕೈ ನಾಯಕರೇ ಕಾರಣ. ನನ್ನನ್ನ ರಾಜಕೀಯವಾಗಿ ಮುಗಿಸುತ್ತಾರಂತೆ. ನಾನೇನು ಎಳೆ ಮಗು ಅಲ್ಲ. 20 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಡಿ ಕೆ ಶಿವಕುಮಾರ್ಗೆ ಟಾಂಗ್ ಕೊಟ್ಟರು.
ಸಭೆ ಸೇರಿದ್ದೆವು :
ರಾಜೀನಾಮೆ ನೀಡುವ ಮುನ್ನ ಸಭೆ ಸೇರಿದ್ದೆವು. ಕೆ ಹೆಚ್ ಮುನಿಯಪ್ಪ ಸೋಲಿಸೋಕೆ ಏನೆಲ್ಲಾ ಮಾಡಿಲ್ಲ. ಕೋಲಾರದ ಎಂಟು ಶಾಸಕರು ಸೇರಿ ಸೋಲಿಸಿದ್ದಾರೆ. ತುಮಕೂರಿನಲ್ಲಿ ಗೌಡರನ್ನ ಸೋಲಿಸ್ತಾರೆ. ಮಂಡ್ಯದಲ್ಲಿ ನಿಖಿಲ್ ಸೋಲಿಸ್ತಾರೆ. ದೇವೇಗೌಡರನ್ನ ಸೋಲಿಸಿದವರು ಯಾರು? ನಿಖಿಲ್ ಸೋಲಿಸಬೇಕೆಂದವರು ಯಾರು? ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.
ನೀವು ಏನು ಕಿರುಕುಳ ಬೇಕಾದರೂ ಕೊಡಿ. ಅದನ್ನ ತಡೆದುಕೊಳ್ಳುವ ಶಕ್ತಿ ನನಗಿದೆ. ಅಸೆಂಬ್ಲಿಯಲ್ಲಿ ಶ್ರೀನಿವಾಸ್‌ಗೌಡ ಆರೋಪಿಸಿದ್ರು. ನನಗೂ 5 ಕೋಟಿ ಕೊಟ್ಟರು ಎಂದು ಆರೋಪಿಸಿದ್ದರು. ಹಾಗಾದ್ರೆ ಒಂದು ತಿಂಗಳು ಹಣ ಮನೆಯಲ್ಲಿಟ್ಟಿದ್ದು ಯಾಕೆ? ಅದಕ್ಕೇನಾದರೂ ಇಂಟರೆಸ್ಟ್ ಕೊಡ್ತಿದ್ರಾ? ಎಂದು ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್‌ಗೌಡರಿಗೆ ಪ್ರಶ್ನೆ ಹಾಕಿದರು.
ಕೃಷ್ಣ ಬೈರೇಗೌಡ್ರಿಗೆ ತಿರುಗೇಟು:
ಮಾಜಿ ಸಚಿವ ಕೃಷ್ಣ ಬೈರೇಗೌಡರ ಆರೋಪಕ್ಕೂ ಪ್ರತಿಕ್ರಿಯಿಸಿ, ನಾನು ಬೆನ್ನಿಗೆ ಚೂರಿ ಹಾಕಿದವನಲ್ಲ. ನಾನು ಮಂತ್ರಿಗಿರಿಗೆ ರಾಜೀನಾಮೆ ಕೊಟ್ಟವನಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ಕೊಟ್ಟವನು. ಇದನ್ನ ಜನ ಅರಿಯಬೇಕು. ತಹಶೀಲ್ದಾರ್ ಸರಿಯಿಲ್ಲ ಎಂದು ವರ್ಗಾವಣೆ ಮಾಡಿಸಿದ್ದೆ. ವರ್ಗಾವಣೆ ಮಾಡಿಸಿದ್ದನ್ನ ಸ್ಟೇ ಕೊಟ್ರು. ಬಿಡಿಎ ಅಧಿಕಾರಿ ವರ್ಗಾವಣೆಗೂ ಬೇಡಿಕೆಯಿಟ್ಟಿದ್ದೆ. ಹಲವು ಪ್ರಯತ್ನದ ನಂತರ ವರ್ಗಾವಣೆ ಮಾಡಿದ್ರು. ನಾನು ಮಂತ್ರಿ ಮಾಡಿ ಎಂದು ಯಾರನ್ನೂ ಕೇಳಲಿಲ್ಲ ಎಂದು ಖಾರವಾಗಿ ನುಡಿದರು.
ಮಾಜಿ ಡಿಸಿಎಂ ಪರ ಬ್ಯಾಟಿಂಗ್:
ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಪರ ಬ್ಯಾಟಿಂಗ್ ಮಾಡಿದ ಅವರು, ನನ್ನನ್ನ ರಾಜಕೀಯವಾಗಿ ಬೆಳೆಸಿದ್ದು ಪರಮೇಶ್ವರ್. ಜಿಲ್ಲಾ ಪಂಚಾಯತ್‌ಗೆ ಟಿಕೆಟ್ ಕೊಟ್ರು. ಶಾಸಕನಾದ ವೇಳೆಯೂ ನನಗೆ ಟಿಕೆಟ್ ಕೊಟ್ರು. ಅವರೇ ಸರ್ಕಾರದ ಬಗ್ಗೆ ಆರೋಪ ಮಾಡಿದ್ರು. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸತ್ಯಹರಿಶ್ಚಂದ್ರರು. ರಾಜೀನಾಮೆ ಕೊಟ್ಟಾಗ ಅದರ ಕಾರಣ ಕೇಳಬೇಕು. ಅದನ್ನೂ ಮಾಡಲಿಲ್ಲ. ನಮ್ಮನ್ನ ಮನವೊಲಿಸುವ ಪ್ರಯತ್ನ ಮಾಡಲಿಲ್ಲ. ಮೈತ್ರಿ ನಾಯಕರೂ ಮಾಡಲಿಲ್ಲ. ಡಿಕೆಶಿ ಮುಂಬೈಗೆ ಬಂದು ಮಳೆಯಲ್ಲಿ ಕುಳಿತ್ರು. ಪಾಪ ಅವರು ನಾನು ಮನೆಗೆ ಹೋದಾಗ ಯಾಕೆ ಕೇಳಲಿಲ್ಲ.
ನಮ್ಮ ಕೇಸ್ ನಡೆಸೋಕೆ ಎಂಟಿಬಿ 60 ಲಕ್ಷ ಕೊಟ್ಟಿದ್ದಾರೆ. ಭೈರತಿ ಬಸವರಾಜು 50 ಲಕ್ಷ ಕೊಟ್ಟಿದ್ದಾರೆ. ಡಾ.ಸುಧಾಕರ್ 25 ಲಕ್ಷ ಅಡ್ವೋಕೇಟ್ ಫೀಜು ಕಟ್ಟಿದ್ದಾರೆ. ನಾವು ಅಲ್ಲಿ ನಮ್ಮ ಖರ್ಚಿನಿಂದಲೇ ಇದ್ದದ್ದು. ಇದು ನಿಮಗೆ ಗೊತ್ತಾಗಲಿ ಎಂದು ಹೇಳ್ತಿದ್ದೇನೆ. ನಾವು ಬೇರೆಯವರ ಹಂಗಿನಲ್ಲಿ ಅಲ್ಲಿ ಹೋಗಿರಲಿಲ್ಲ ಎಂದು ಮುಂಬೈ ವಾಸ್ತವ್ಯದ ಲೆಕ್ಕ ಕೊಟ್ಟರು.