ಬೆಂಗಳೂರು: ಸಿಎಂ ನಿವಾಸಕ್ಕೆ ಬೆಳ್ಳಂಬೆಳಗ್ಗೆ ಅನರ್ಹ ಶಾಸಕ ಸುಧಾಕರ್ ಭೇಟಿ ನೀಡಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ರು.
ನಂತರ ಮಾಧ್ಯಮ ಜೊತೆ ಮಾತಾಡಿದ ಅವರು, ಯಡಿಯೂರಪ್ಪನವರು ಮುಂಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ನಾನು ಇರಲಿಲ್ಲ. ಹಾಗಾಗಿ ಈಗ ಬಂದು ಅಭಿನಂದನೆ ಸಲ್ಲಿಸಿದ್ದೇನೆ. ಸಿಎಂ ಜೊತೆ ರಾಜಕೀಯವಾಗಿ ಏನು ಚರ್ಚೆಯಾಗಿಲ್ಲ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಿದ್ದೇನೆ ಅಷ್ಟೇ. ಅಭಿವೃದ್ಧಿಗೆ ಅನುದಾನ ನೀಡ್ತಾರೆ ಅನ್ನೋ ವಿಶ್ವಾಸ ಇದೆ. ನಮ್ಮ ಜಿಲ್ಲೆಗೆ ಮೆಡಿಕಲ್ ಕಾಲೇಜ್‌ಗೆ ಅಪ್ರೋವ್ ಆಗಿದ್ರೂ, ಹಿಂದಿನವರು ಅನುದಾನ ಕೊಡ್ಲಿಲ್ಲ, ಈಗ ಇವರಿಗೆ ಮನವಿ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಹಾಗೂ ನಮ್ಮ ಪಕ್ಷದಲ್ಲಿನ ರಾಜಕೀಯ ಧೋರಣೆಯಿಂದ ಮನನೊಂದು ರಾಜೀನಾಮೆ ನೀಡಿದ್ದೇನೆ ಎಂದರು.
ಇನ್ನು ಕ್ಷೇತ್ರದ ಜನರಿಗೆ ಯಾರನ್ನ ಗೆಲ್ಲಿಸಬೇಕು ಅನ್ನೋದು ಗೊತ್ತಿದೆ. ಎಲ್ಲಿಂದಾನೋ ಕಾಲರ್ ಏರಿಸ್ಕೊಂಡು ಬಂದ್ರೇ ಜನ ವೋಟ್ ಹಾಕಲ್ಲ. ಅತಿರಥ ಮಹಾರಥರೆಲ್ಲಾ ರಾಜ್ಯ ಸುತ್ತಿದ್ರೂ ಒಂದೇ ಸೀಟು ಗೆದ್ದಿದ್ಯಾಕೆ.? ಕ್ಷೇತ್ರದಲ್ಲಿ ಕೆಲಸ ಮಾಡಿರೋರನ್ನ ಜನರು ಗೆಲ್ಲಿಸ್ತಾರೆ ಸ್ಥಳೀಯವಾಗಿರುವವರನ್ನ ನೋಡ್ಕೊಂಡು ವೋಟ್ ಹಾಕ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸುಧಾಕರ್ ವಾಗ್ದಾಳಿ ನಡೆಸಿದ್ರು.
ಇನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಕುರಿತು ಮಾತನಾಡಿದ ಅವರು, ಮೌಲ್ಯಗಳ ಪ್ರತಿಪಾದಕರಂತೆ ರಮೇಶ್ ಕುಮಾರ್ ನಟಿಸ್ತಾರೆ. ಅವರ ಆದೇಶ ಅನೈತಿಕವಾದದ್ದು. ಅದನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇವೆ. ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ಇಂತಹವರಿಂದ ಸಂವಿಧಾನಕ್ಕೆ ಅಪಚಾರ ಆಗ್ತಿದೆ. ತೀರ್ಪು ನಿಧಾನವಾದ್ರೂ ಪರವಾಗಿಲ್ಲ, ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ರಮೇಶ್ ಕುಮಾರ್ ವಿರುದ್ಧ ಅಸಮಧಾನ ಹೊರಹಾಕಿದರು.