ಬೆಂಗಳೂರು: ಅತೃಪ್ತ ಶಾಸಕರಿಗೆ ಸ್ಪೀಕರ್ ನೊಟೀಸ್ ನೀಡಿದ್ದರೂ, ಹಾಜರಾಗದೆ ಕಾಲಾವಕಾಶ ಕೇಳುತ್ತಿರುವುದು ಸರಿಯಲ್ಲ ಎಂದು ಶಾಸಕ ಆರ್.ವಿ. ದೇಶಪಾಂಡೆ ಸಿಡಿಮಿಡಿಗೊಂಡರು.
ಸದನ ಪ್ರವೇಶಿಸುವ ಮುನ್ನ ಮಾತನಾಡಿದ ದೇಶಪಾಂಡೆ, ಅತೃಪ್ತ ಶಾಸಕರಿಗೆ ಇಂದು ನೊಟೀಸ್ ನೀಡಿದ ಪ್ರಕಾರ ಸ್ಪೀಕರ್ ಮುಂದೆ ಹಾಜರಾಗಿ ಹೇಳಿಕೆ ಕೊಡಬೇಕಾಗಿತ್ತು. ಆದರೆ ಸದನಕ್ಕೆ ಹಾಜರಾಗದೆ, ವಿಚಾರಣೆಗೂ ಹಾಜರಾಗದೇ ಗೈರಾಗಿರುವುದು ಶೋಭೆ ತರುವುದಿಲ್ಲ. ಇಂದು ವಿಪ್ ಜಾರಿಯಾಗುವ ಸಮಯದಲ್ಲಿ ಈ ರೀತಿ ಸಮಯಾವಕಾಶ ಕೇಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ವಿಪ್ ಜಾರಿ ಸಂಬಂಧ ಹಾಗೂ ವಿಶ್ವಾಸಮತ ಯಾಚನೆ ಗೊತ್ತುವಳಿ ಕುರಿತು ಚರ್ಚೆಗಳ ಬಗ್ಗೆ ನಿನ್ನೆ ಇನ್ನೂ ಸಾಕಷ್ಟು ಸದಸ್ಯರು ಮಾತನಾಡಬೇಕಿರುವುದರಿಂದ ಮುಂದೆ ಹಾಕುವುದಕ್ಕೆ ಸ್ಪೀಕರ್ ಬಳಿ ನಾನೇ ಮನವಿ ಮಾಡಿದ್ದೆ. ಚರ್ಚೆ ಪೂರ್ಣಗೊಂಡ ಬಳಿಕ ಎಲ್ಲರ ಜೊತೆ ಮಾತನಾಡಿ ಇಂದು ಮತ ನಿರ್ಣಯಕ್ಕೆ ಸ್ಪೀಕರ್ ಹಾಕೋದಾಗಿ ಹೇಳಿದ್ದಾರೆ ಎಂದರು. ಮೈತ್ರಿ ನಾಯಕರು ಸದನಕ್ಕೆ ತಡವಾಗಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂಜೆ 6 ಗಂಟೆವರೆಗೆ ಸಮಯಾವಕಾಶವಿದೆ. ಉದ್ದೇಶಪೂರ್ವಕವಾಗಿ ಯಾರೂ ಸದನದಲ್ಲಿ ಕಾಲಹರಣ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಅತೃಪ್ತ ಶಾಸಕರು ನಾಲ್ಕು ವಾರ ಸಮಯ ಕೇಳುತ್ತಿರುವುದು ಕಾನೂನು ಬಾಹಿರ ಕೃತ್ಯ. ಪಕ್ಷಾಂತರ ನಿಷೇಧ ಕಾಯ್ದೆಯನ್ನ ಹಣಿಯೋ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಕೊಟ್ಟಿರುವ ಸಮಯ ಜಾಸ್ತಿಯಾಗಿದೆ. ಈ ಬಗ್ಗೆ 24 ಗಂಟೆಯೊಳಗೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಇವರೆಲ್ಲರೂ ಪ್ರಜಾಪ್ರಭುತ್ವವನ್ನು ಕಣ್ಣೆದುರೇ ಹತ್ಯೆ ಮಾಡ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಸದನದಲ್ಲಿ ನಾವು ಕಾಲಹರಣ ಮಾಡುತ್ತಿಲ್ಲ. ವಿಶ್ವಾಸಮತ ಯಾಚನೆ ನಿರ್ಣಯ ಬಗ್ಗೆ ಇಂದು ಸಹ ಚರ್ಚೆ ನಡೆಯಲಿದ್ದು ಸ್ಪೀಕರ್ ಸೂಚನೆಯಂತೆ ನಿಗದಿತ ಸಮಯದಲ್ಲೇ ಮತಕ್ಕೆ ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು.